ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಲಿ: ಡಿಸಿ ಗಂಗೂಬಾಯಿ

KannadaprabhaNewsNetwork | Published : May 25, 2024 12:45 AM

ಸಾರಾಂಶ

ಜಿಲ್ಲೆಯಲ್ಲಿ 2023ರ ಏಪ್ರಿಲ್‌ದಿಂದ 2024ರ ಮಾರ್ಚ್‌ವರೆಗೆ 2631 ತಪಾಸಣೆಗಳನ್ನು ನಡೆಸಿದ್ದು, ಯಾವುದೇ ಬಾಲಕಾರ್ಮಿಕರು ಪತ್ತೆಯಾಗಿಲ್ಲ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಿ, ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ, ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 14 ವರ್ಷದೊಳಗಿನ ಮಕ್ಕಳು ಅಪಾಯಕಾರಿ ಉದ್ದಿಮೆ/ಕೈಗಾರಿಕೆಗಳಲ್ಲಿ ಹಾಗೂ ಅಪಾಯಕಾರಿ ಅಲ್ಲದ ಚಟುವಟಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಲ್ಲಿ ಅಂತಹ ಮಕ್ಕಳನ್ನು ಅಲ್ಲಿಂದ ಮುಕ್ತಗೊಳಿಸಿ, ಅವರಿಗೆ ವಿದ್ಯಾಭ್ಯಾಸ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಕಾರ್ಮಿಕ ಇಲಾಖೆ, ಪೊಲೀಸ್, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಇನ್ನಷ್ಟು ಸಂಘಟಿತವಾಗಿ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ಜಿಲ್ಲಾದ್ಯಂತ ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮತ್ತು ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವವರಿಗ ನೀಡುವ ಶಿಕ್ಷೆಯ ಪ್ರಮಾಣ ಮತ್ತು ದಂಡದ ಕುರಿತಂತೆ ಎಲ್ಲ ಕೈಗಾರಿಕೆಗಳು, ಹೋಟೆಲ್‌ಗಳ ಮಾಲೀಕರಿಗೆ ಮತ್ತು ಉದ್ದಿಮೆದಾರರಿಗೆ ಜಾಗೃತಿ ಮೂಡಿಸುವುದರ ಜತೆಗೆ, ಈ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತ ಪ್ರಚಾರ ಫಲಕಗಳನ್ನು ಅಳವಡಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆಯಡಿ ಜಿಲ್ಲೆಯಲ್ಲಿ ಈಗಾಗಲೇ ನೇಮಿಸಲಾಗಿರುವ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಅನಿರೀಕ್ಷಿತ ತಪಾಸಣೆಗಳನ್ನು ನಡೆಸಿ, ಬಾಲಕಾರ್ಮಿಕರನ್ನು ಪತ್ತೆ ಹಚ್ಚಬೇಕು. ಬಸ್ ಮತ್ತು ರೈಲ್ವೆ ನಿಲ್ದಾಣದಲ್ಲಿ ಕಂಡುಬರುವ ಮಕ್ಕಳಿಗೆ ಸೂಕ್ತ ಪುರ್ನವಸತಿ ಸೌಲಭ್ಯಗಳನ್ನು ಒದಗಿಸಬೇಕು. ಬಾಲಕಾರ್ಮಿಕರು ಪತ್ತೆಯಾದಲ್ಲಿ ಸಂಬಂಧಪಟ್ಟ ಮಾಲೀಕರ ವಿರುದ್ಧ ಕಾನೂನಿನನ್ವಯ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಕಾರ್ಮಿಕ ಇಲಾಖೆಯ ಅಧಿಕಾರಿ ವೀಣಾ ಮಾಸ್ತಿ ಮಾತನಾಡಿ, ಜಿಲ್ಲೆಯಲ್ಲಿ 2023ರ ಏಪ್ರಿಲ್‌ದಿಂದ 2024ರ ಮಾರ್ಚ್‌ವರೆಗೆ 2631 ತಪಾಸಣೆಗಳನ್ನು ನಡೆಸಿದ್ದು, ಯಾವುದೇ ಬಾಲಕಾರ್ಮಿಕರು ಪತ್ತೆಯಾಗಿಲ್ಲ. ಆದರೆ 9 ಮಂದಿ ಕಿಶೋರ ಕಾರ್ಮಿಕರು ಪತ್ತೆಯಾಗಿದ್ದು, ಅಂತಹ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪ ವಿಭಾಗಾಧಿಕಾರಿ ಕನಿಷ್ಕ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಸಿ.ಟಿ. ಜಯಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share this article