ಮುಳಗುಂದ: ಮಾನಸಿಕ ಕಾಯಿಲೆಗಳಿಂದ ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕವು ದೇಶದಲ್ಲಿ 4ನೇ ಸ್ಥಾನ ಹೊಂದಿರುವುದು ಕಳವಳಕಾರಿ ಸಂಗತಿ. ಮಾನಸಿಕ ಅನಾರೋಗ್ಯ ಕುರಿತು ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು ಎಂದು ಕೆ.ಎಚ್. ಪಾಟೀಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಿತೇಂದ್ರ ಮುಗಳಿ ಹೇಳಿದರು.ಪಟ್ಟಣದ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಹಯೋಗದಲ್ಲಿ ನಡೆದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.ಮಾನಸಿಕ ಸಮಸ್ಯೆಗಳಾದ ಖಿನ್ನತೆ, ಆತಂಕ, ಸ್ಕಿಜೋಫ್ರೇನಿಯಾ ಮಾದಕ ವ್ಯಸನ ಮೊದಲಾದವುಗಳಿಗೆ ಯುವಜನತೆ ಬಲಿಯಾಗುತ್ತಿದ್ದು, ದೇಶಕ್ಕೆ ಹಾನಿಯನ್ನುಂಟು ಮಾಡುವ ಸಂಗತಿಯಾಗಿದೆ. ಮನೋವೈದ್ಯರನ್ನು ಸಂಪರ್ಕಿಸುವ ಮೂಲಕ ಮಾನಸಿಕ ಕಾಯಿಲೆಗಳನ್ನು ಪರಿಹರಿಸಿಕೊಳ್ಳಬಹುದು. ಈ ರೀತಿಯ ಕಾಯಿಲೆಗಳ ಬಗ್ಗೆ ಜಾಗ್ರತರಾಗುವುದು ಮತ್ತು ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡಬೇಕು ಎಂದರು.ಮೂಢನಂಬಿಕೆಗಳನ್ನು ನಂಬುವ ಪ್ರಜ್ಞಾವಂತ ಸಮಾಜವು ಮಾನಸಿಕ ಕಾಯಿಲೆಗಳಿಗೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಬದಲಾಗಿ ಮಾಟ, ಮಂತ್ರ ಮಾಡುವರನ್ನು, ಜ್ಯೋತಿಷಿಗಳನ್ನು ನಂಬಿ ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಮೂಢನಂಬಿಕೆಗಳನ್ನು ತೊಡೆದು ಹಾಕಿ ವೈದ್ಯರ ಸಲಹೆ ಪಡೆದು ಮಾನಸಿಕ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆರ್.ಎಂ. ಕಲ್ಲನಗೌಡರ ಮಾತನಾಡಿ, ಮನುಷ್ಯ ಪ್ರತಿನಿತ್ಯವೂ ಒಂದಲ್ಲ ಒಂದು ರೀತಿಯ ಮಾನಸಿಕ ಒತ್ತಡ ಅನುಭವಿಸುತ್ತಾರೆ. ಒತ್ತಡದಿಂದ ಹೊರಬರಬೇಕಾದಲ್ಲಿ ಮನೋವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು. ವಿದ್ಯಾರ್ಥಿ ಕಲ್ಯಾಣ ಘಟಕದ ಸಂಚಾಲಕ ವಿನಾಯಕ ಬಿ., ಐಕ್ಯುಎಸಿ ಸಂಚಾಲಕ ನಾಗರಾಜ ಎ. ಇದ್ದರು. ಸಾಂಸ್ಕೃತಿಕ ವಿಭಾಗದ ಶಿವಪ್ಪ ಎಸ್. ಮುದಿಯಜ್ಜನವರ ಕಾರ್ಯಕ್ರಮ ನಿರೂಪಿಸಿದರು.