ಒನಕೆ ಓಬವ್ವ ಧೈರ್ಯ, ಸಾಹಸ ಮೈಗೂಡಿಸಿಕೊಳ್ಳಿ

KannadaprabhaNewsNetwork |  
Published : Nov 12, 2025, 01:15 AM IST
11ಕೆಪಿಆರ್‌ಸಿಆರ್‌ 01: | Kannada Prabha

ಸಾರಾಂಶ

ಹೆಣ್ಣು ಮಕ್ಕಳು, ಮಹಿಳೆಯರು ವೀರವನಿತೆ ಒನಕೆ ಓಬವ್ವನ ಧೈರ್ಯ ಸಾಹಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಸಲಹೆ ನೀಡಿದರು.

ರಾಯಚೂರು: ಹೆಣ್ಣು ಮಕ್ಕಳು, ಮಹಿಳೆಯರು ವೀರವನಿತೆ ಒನಕೆ ಓಬವ್ವನ ಧೈರ್ಯ ಸಾಹಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಸಲಹೆ ನೀಡಿದರು.ಸ್ಥಳೀಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಒನಕೆ ಓಬವ್ವನ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದ ಅವರು. ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ಸ್ಫೂರ್ತಿದಾಯಕವಾಗಿದೆ. ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿದಾಗ, ಮನೆಯಲ್ಲಿನ ಒನಕೆಯನ್ನೇ ಆಯುಧವಾಗಿ ಬಳಸಿ ನೂರಾರು ಸೈನಿಕರ ರುಂಡಗಳನ್ನು ಚಂಡಾಡಿ, ಕೋಟೆಯನ್ನು ರಕ್ಷಿಸಿ ವೀರನಾರಿ ಎನ್ನುವ ಬಿರುದು ಪಡೆದುಕೊಂಡರು. ಇಂತಹ ವೀರನಾರಿಯ ಚರಿತ್ರೆಯನ್ನು ಎಲ್ಲೆಡೆ ಪಸರಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ವಿದ್ಯಾರ್ಥಿಗಳು ವೀರ ನಾರಿ ಒನಕೆ ಓಬವ್ವನ ಧೈರ್ಯ ಸಾಹಸವನ್ನು ಮೈಗೂಡಿಸಿಕೊಳ್ಳಬೇಕು.ರಾಯಚೂರು ಜಿಲ್ಲೆ ಅಭಿವೃದ್ಧಿಪಥದಲ್ಲಿದೆ. ಮೈಸೂರು, ಬೆಳಗಾವಿ ಜಿಲ್ಲೆಗಳಲ್ಲಿ ಆಗಿರುವಂತಹ ಬದಲಾವಣೆಗಳು ನಮ್ಮಲ್ಲೂ ಆಗಬೇಕು. ಅಪೌಷ್ಟಿಕತೆಯನ್ನು ಹೋಗಲಾಡಿಸಬೇಕು. ಪೂರ್ಣ ಪ್ರಮಾಣದ ಶಿಕ್ಷಣದ ಕೊರತೆ ತಪ್ಪಬೇಕು. ತಾಯಿ ಮತ್ತು ಮಕ್ಕಳು ಎದುರಿಸುತ್ತಿರುವ ರಕ್ತ ಹೀನತೆಯಂತಹ ಸಮಸ್ಯೆಗಳು ತೊಲಗಬೇಕು. ಅನೇಕ ಪ್ರಗತಿದಾಯಕ ಕಾರ್ಯಕ್ರಮ ರೂಪಿಸುತ್ತಿರುವ ಜಿಲ್ಲಾಡಳಿತಕ್ಕೆ ಜನತೆ ಸಹಕಾರ ನೀಡಬೇಕೆಂದು ಹೇಳಿದರು.ಈ ಭಾಗದ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಐಎಎಸ್, ಐಪಿಎಸ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳಿಗೇರಬೇಕು. ಈ ಭಾಗದಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ ಕಡಿಮೆ ಇದ್ದು, ವಿದ್ಯಾರ್ಥಿನಿಯರು ಓದಿನಲ್ಲಿ ಮುಂದೆ ಬರಬೇಕು. ಹಾಸ್ಟೇಲ್ ಸೌಕರ್ಯ ಪಡೆದುಕೊಂಡು ವಿದ್ಯಾರ್ಥಿನಿಯರು ಉನ್ನತ ವ್ಯಾಸಾಂಗ ಮಾಡಬೇಕು ಎಂದು ಸಲಹೆ ಮಾಡಿದರು.ದೇವದುರ್ಗ ಸ ಉಪನ್ಯಾಸಕಿ ಕೆ. ಶಿಲ್ಪಕಲಾ ಬೊಮ್ಮನಾಳ ವಿಶೇಷ ಉಪನ್ಯಾಸ ನೀಡಿ, ಒನಕೆ ಓಬವ್ವ ನಿಷ್ಠೆ ಹಾಗೂ ತ್ಯಾಗ ಮತ್ತು ಧೈರ್ಯದ ಸಂಗಮ. ನಮಗೆ ರಾಷ್ಟ್ರೀಯತೆಯ ಪರಿಕಲ್ಪನೆಯೇ ಬಂದಿರದ ಸಮಯದಲ್ಲಿ ಒನಕೆ ಓಬವ್ವ ಅವರು ಚಿತ್ರದುರ್ಗದ ಕೋಟೆಯ ರಕ್ಷಣೆಗೆ ಹೋರಾಡಿದ್ದಾರೆ. ನಾವೆಲ್ಲರೂ ಓಬವ್ವ ಅವರಿಂದ ಸ್ಫೂರ್ತಿ ಪಡೆಯಬೇಕು. ಒನಕೆ ಓಬವ್ವ ಚರಿತ್ರೆಯು ಸ್ತ್ರಿ ಸಬಲೀಕರಣಕ್ಕೆ ಸ್ಫೂರ್ತಿಯಾಗಿದೆ. ಅವರ ಚರಿತ್ರೆಯು ಯುವ ಜನತೆಗೆ ಪ್ರೇರಣೆ ನೀಡುತ್ತದೆ. ಪ್ರತಿಯೊಬ್ಬ ಪುರುಷನ ಸಾಧನೆಯ ಹಿಂದೆ ಹೆಣ್ಣಿನ ಶಕ್ತಿ ಇರುತ್ತದೆ ಎಂಬುದಕ್ಕೆ ಉದಾಹರಣೆ ಒನಕೆ ಓಬವ್ವ ಎಂದು ತಿಳಿಸಿದರು.ನಮ್ಮ ನಮ್ಮ ಕೆಲಸವನ್ನು ನಾವು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಣೆ ಮಾಡಬೇಕು. ಪ್ರತಿಯೊಬ್ಬ ಮಹಿಳೆಯು ಸ್ವಾವಲಂಬಿಯಾಗಿ ಬದುಕಬೇಕು. ಆಂತರಿಕವಾಗಿ ಬದಲಾಗಬೇಕು. ಮಹಿಳಾಕುಲದ ಸಬಲೀಕರಣಕ್ಕಾಗಿ ಸರ್ಕಾರ ರೂಪಿಸುವ ಅನೇಕ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡಬೇಕು ಎಂದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾತನಾಡಿದರು.ಈ ಸಂದರ್ಭದಲ್ಲಿ ರಾಯಚೂರಿನ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಚನ್ನಬಸವ, ತಹಸೀಲ್ದಾರ್ ಸುರೇಶ್ ವರ್ಮ, ಸಮಾಜದ ಮುಖಂಡರಾದ ವಿನೋದ ಸಾಗರ್, ಎಂ.ವಸಂತ, ಅರ್ಚಾನ, ಪ್ರಿಯದರ್ಶಿನಿ, ಲಲಿತಾ ಕೊಂಬಿನ್ ಸೇರಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಹಕ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿ
ಆಂಧ್ರ ಗಡಿಯಲ್ಲಿ ಕನ್ನಡ ಶಾಲಾರಂಭಕ್ಕೆ ನೆರವು ನೀಡಿದ್ದ ಚನ್ನಬಸವ ಶಿವಯೋಗಿ