ಇ-ತ್ಯಾಜ್ಯ, ಮೈಕ್ರೋ ಪ್ಲಾಸ್ಟಿಕ್ ಬಗ್ಗೆ ಎಚ್ಚರ: ನರೇಂದ್ರಸ್ವಾಮಿ

KannadaprabhaNewsNetwork |  
Published : Oct 14, 2025, 01:00 AM IST
ಮಂಗಳೂರಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ | Kannada Prabha

ಸಾರಾಂಶ

ಈ ಭೂಮಿ ಮೇಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇ-ತ್ಯಾಜ್ಯ ಮತ್ತು ಮೈಕ್ರೋ ಪ್ಲಾಸ್ಟಿಕ್ ಬಗ್ಗೆ ಗಂಭೀರವಾದ ಚಿಂತನೆ ನಡೆಸಿ ಇವುಗಳ ಬಳಕೆಯನ್ನು ಕಮ್ಮಿ ಮಾಡುವ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸಲಹೆ  

 ಮಂಗಳೂರು :  ಈ ಭೂಮಿ ಮೇಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇ-ತ್ಯಾಜ್ಯ ಮತ್ತು ಮೈಕ್ರೋ ಪ್ಲಾಸ್ಟಿಕ್ ಬಗ್ಗೆ ಗಂಭೀರವಾದ ಚಿಂತನೆ ನಡೆಸಿ ಇವುಗಳ ಬಳಕೆಯನ್ನು ಕಮ್ಮಿ ಮಾಡುವ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಸಲಹೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಇ-ತ್ಯಾಜ್ಯ ಮತ್ತು ಮೈಕ್ರೋ ಪ್ಲಾಸ್ಟಿಕ್ ಬಳಕೆಯನ್ನು ಕಮ್ಮಿ ಮಾಡಿಸಲು ಮಂಡಳಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ವಿಶೇಷವಾಗಿ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಈ ಭೂಮಿ ಉಳಿಯಬೇಕಾದರೆ ಓಝೋನ್ ಪದರ ಉಳಿಯಬೇಕು. ಹಾಗೆಯೇ ವಾಯು ಮತ್ತು ಜಲ ಉಳಿಯಬೇಕು. ತಜ್ಞರು ಜಗತ್ತಿನಾದ್ಯಂತ ಜಲಕ್ಷಾಮ ಉಂಟಾಗಬಹುದು. ಮೂರನೇ ಯುದ್ಧ ನೀರಿಗಾಗಿ ನಡೆಯಬಹುದು ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಲ ಮಾಲಿನ್ಯದ ಬಗ್ಗೆ ಅತ್ಯಂತ ಜಾಗೃತರಾಗಬೇಕಾಗಿದೆ ಎಂದು ನರೇಂದ್ರಸ್ವಾಮಿ ಎಚ್ಚರಿಸಿದರು.

ಮಂಡಳಿ ವತಿಯಿಂದ ಜಲಮಾಲಿನ್ಯ ನಿಯಂತ್ರಣ ಮಾಡಲು ಸಮುದ್ರ ಮಾತ್ರವಲ್ಲದೆ, ರಾಷ್ಟ್ರೀಯ ಗಂಗಾ ಶುದ್ಧೀಕರಣ ಮಿಷನ್ ಅಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿ ನೀರಿನ ಮಾದರಿಗಳನ್ನು ಪ್ರತಿ ತಿಂಗಳು ಪರೀಕ್ಷಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ಕೈಗಾರೀಕರಣ, ಬಂದರು, ನೌಕಾಯಾನ, ಕೃಷಿ ಮತ್ತು ನಗರೀಕರಣದಿಂದಾಗಿ ಹಲವು ರೀತಿಯ ಪರಿಸರ ಸಂಬಂಧಿತ ಸವಾಲುಗಳು ಉದ್ಭವಿಸಿವೆ. ಎಲ್ಲವನ್ನೂ ಹಂತಹಂತವಾಗಿ ನಿಭಾಯಿಸಲು ಮಂಡಳಿ ಮತ್ತು ಇಲ್ಲಿನ ಪ್ರಾದೇಶಿಕ ಕಚೇರಿಗಳು ಕೆಲಸ ಮಾಡುತ್ತಿವೆ. ಈ ಜಿಲ್ಲೆಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಏಕ ಬಳಕೆ ಪ್ಲಾಸ್ಟಿಕ್ ನ್ನು ಬಳಸುತ್ತಾರೆ. ಅಂಥ ಪ್ಲಾಸ್ಟಿಕ್ ಸಮುದ್ರ ಸೇರುವುದನ್ನು ತಡೆಯಲು ಇಲ್ಲಿ ಆಗಾಗ ಹಲವು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬೀಚ್ ಕ್ಲಿನಿಂಗ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ಲ್ಯಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸುಮಾರು 1.70 ಲಕ್ಷ ಕಿಲೋ ಗ್ರಾಂ. ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗಿದೆ. ಬಂಟ್ವಾಳ ಮತ್ತು ಕೆದಂಬಾಡಿ ಘಟಕಗಳಲ್ಲಿ ಬರುವ ಪ್ರತಿದಿನ 18-20 ಟನ್ ಒಣ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿರುವುದು ರಾಜ್ಯದಲ್ಲೇ ಮೊದಲು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೈಗೊಂಡಿರುವ ಈ ಪ್ರಯತ್ನಕ್ಕೆ ಪ್ರಧಾನಿಯವರು 27ನೇ ಮನ್ ಕಿ ಬಾತ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.

ಕೊಲ್ಲೂರಿನ ಶ್ರೀ ಮೂಕಾಂಬಿಕಾ ಕ್ಷೇತ್ರದ ಸ್ನಾನಘಟ್ಟದಲ್ಲಿ ಇತ್ತೀಚೆಗೆ ಸ್ವಚ್ಛತಾ ಕಾರ್ಯಕ್ರಮ ನಡೆದಿದ್ದು, ಆ ವೇಳೆ, ಸ್ನಾನಘಟ್ಟದಲ್ಲಿ ಸುಮಾರು 0.5 ಟನ್‌ನಷ್ಟು ತ್ಯಾಜ್ಯಗಳನ್ನು ಹೊರತೆಗೆಯಲಾಗಿದೆ. ಇದೇ ವರ್ಷ ಉಡುಪಿ ಜಿಲ್ಲೆಯ ಮಲ್ಪೆ, ಕಾಪು, ಡೆಲ್ಟಾ-ಕೋಡಿ ಬೆಂಗ್ರೆ ಬೀಚ್‌ಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸದರಿ ಬೀಚ್‌ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಲ್ಪೆ ಬೀಚ್‌ನಲ್ಲಿ 2.5 ಟನ್‌ ತ್ಯಾಜ್ಯ, ಕಾಪು ಬೀಚ್‌ನಲ್ಲಿ 1.8 ಟನ್‌ ತ್ಯಾಜ್ಯ, ಡೆಲ್ಟಾ ಬೀಚ್‌ನಲ್ಲಿ 1.2 ಟನ್‌ ತ್ಯಾಜ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಮಂಡಳಿಯ ಕೆಲಸದ ಬಗ್ಗೆ ಅಧ್ಯಕ್ಷರಾದ ಪಿಎಂ ನರೇಂದ್ರಸ್ವಾಮಿ ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜ, ಮಂಜುನಾಥ್ ಭಂಡಾರಿ, ಶಾಸಕರ ಭರತ್ ಶೆಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರುದ್ರಭೂಮಿಗೆ ಮೀಸಲಿಟ್ಟ ಭೂಮಿ ಸೇರಿ ಸರ್ಕಾರಿ ಜಾಗ ಒತ್ತುವರಿ
ತಮ್ಮ ಹಕ್ಕು, ಕರ್ತವ್ಯಗಳ ಬಗ್ಗೆ ಅರಿಯಿರಿ