ಪ್ರಾಣಿಗಳಿಂದ ಹರಡುವ ಸೋಕಿನ ಬಗ್ಗೆ ಎಚ್ಚರಿಕೆ ವಹಿಸಿ

KannadaprabhaNewsNetwork |  
Published : Jul 08, 2025, 12:32 AM IST
ಪೋಟೋ: 07ಎಸ್‌ಎಂಜಿಕೆಪಿ01ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಝೋನೊಸಸ್ ದಿನಾಚರಣೆಯನ್ನು ಡಿಎಚ್‌ಒ ಡಾ.ನಟರಾಜ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಾಣಿಗಳಿಂದ ಮನುಷ್ಯರಿಗೆ ಹಲವಾರು ಸೋಂಕುಗಳು ಹರಡುವ ಕಾರಣ ಪ್ರಾಣಿಗಳ ಕುರಿತು ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಡಿಎಚ್‌ಒ ಡಾ.ನಟರಾಜ್ ಹೇಳಿದರು.

ಶಿವಮೊಗ್ಗ: ಪ್ರಾಣಿಗಳಿಂದ ಮನುಷ್ಯರಿಗೆ ಹಲವಾರು ಸೋಂಕುಗಳು ಹರಡುವ ಕಾರಣ ಪ್ರಾಣಿಗಳ ಕುರಿತು ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಡಿಎಚ್‌ಒ ಡಾ.ನಟರಾಜ್ ಹೇಳಿದರು.ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಝೋನೊಸಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಣಿಗಳಿಂದ ಹರಡುವ ಸೋಂಕುಗಳ ಬಗ್ಗೆ ಹೆಚ್ಚಿನ ಅರಿವು, ಜಾಗೃತಿ ಮತ್ತು ನಿಯಂತ್ರಣದ ಉದ್ದೇಶದಿಂದ ವಿಶ್ವ ಝೂನೋಸಸ್ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಝೂನೋಸಸ್ ಎಂದರೆ ಪ್ರಾಣಿಗಳಿಂದ ಮನುಷ್ಯರಿಗೆ (ಮತ್ತು ಪ್ರಾಣಿಗಳಿಗೆ) ಸೋಂಕು ಹರಡುವ ರೋಗಗಳು. ಇವು ಬ್ಯಾಕ್ಟೀರಿಯಾ, ವೈರಸ್, ಪರಾವಲಂಬಿ ಅಥವಾ ಫಂಗಸ್ ಕಾರಣದಿಂದ ಉಂಟಾಗುತ್ತವೆ. ನಾಯಿ, ಬೆಕ್ಕು, ಕರಡಿ ಇತರೆ ಪ್ರಾಣಿಗಳಿಂದ ರೇಬೀಸ್, ಹಂದಿಗಳಿಂದ ಸ್ವೈನ್ ಫ್ಲೂ, ಹಾಲು, ಮಾಂಸದಿಂದ ಬ್ರುಸೆಲ್ಲೋಸಿಸ್, ಹುಳುಗಳಿಂದ ಲೈಮ್ ರೋಗ, ಉಣ್ಣೆಗಳಿಂದ ಮಂಗನ ಕಾಯಿಲೆ, ಲೆಪ್ಟೊಸೈರಾ ಬ್ಯಾಕ್ಟಿರಿಯಾದಿಂದ ಇಲಿ ಜ್ವರ ಹೀಗೆ ಪ್ರಾಣಿಗಳಿಂದ ಹಲವಾರು ಸೋಂಕುಗಳು ಮನುಷ್ಯರಿಗೆ ಹರಡುತ್ತವೆ. ಆದ್ದರಿಂದ ಪ್ರಾಣಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಾಲ ಕಾಲಕ್ಕೆ ನಾಯಿಗಳಿಗೆ ಲಸಿಕೆ ಹಾಕಿಸಬೇಕು. ಒಮ್ಮೆ ರೇಬಿಸ್ ಬಂದರೆ ಎಂತಹ ಬಲಿಷ್ಠರನ್ನೂ ಇದು ಬಲಿ ತೆಗೆದುಕೊಳ್ಳುತ್ತದೆ. ಆದ್ದರಿಂದ ಬಾರದಂತೆ ಎಚ್ಚರದಿಂದ ಇರಬೇಕು ಎಂದರು.ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ಪ್ರಾಣಿಗಳು ಅದರಲ್ಲೂ ಸಾಕು ಪ್ರಾಣಿಗಳ ಕುರಿತು ಹೆಚ್ಚಿನ ಎಚ್ಚರಿಕೆ ಅಗತ್ಯ. ನಾಯಿಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸಬೇಕು. ಬೆಕ್ಕು ಪರಚಿರುವುದರಿಂದಲೂ ರೇಬಿಸ್ ಬಂದು ರೋಗಿ ಮೃತಪಟ್ಟಿರುವ ಪ್ರಕರಣಗಳು ಇವೆ. ಆದ್ದರಿಂದ ಸಾಕಷ್ಟು ಎಚ್ಚರಿಕೆ ಅಗತ್ಯವಿದೆ ಎಂದು ಹೇಳಿದರು.

ಇಲಿ ಜ್ವರದ ಬಗ್ಗೆಯೂ ಜಾಗೃತರಾಗಿರಬೇಕು. ಇಲಿ ಮೂತ್ರವು ಆಹಾರ ಸೇರಿ ಸೋಂಕು ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ನೀರು, ಆಹಾರ, ಕೈ ಕಾಲುಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಇನ್ನು ಮಲೆನಾಡಿನಲ್ಲಿ ಉಣ್ಣೆಗಳಿಂದ ಮಂಗನ ಕಾಯಿಲೆ ಬರುತ್ತದೆ. ಆದ್ದರಿಂದ ಈ ಕುರಿತು ಅರಿವು ಮತ್ತು ಎಚ್ಚರಿಕೆ ಅತ್ಯಗತ್ಯ ಎಂದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಜು.6 ರಂದು ವಿಶ್ವಾದ್ಯಂತ ಝೂನೋಸಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಡಾ.ಲೂಯಿಸ್ ಪಾಶ್ಚರ್ ಅವರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ, ಏಕೆಂದರೆ ಅವರು ಝೂನೋಸಸ್ ರೋಗಗಳ ವಿರುದ್ಧ ಅಭಿವೃದ್ಧಿಪಡಿಸಿದ್ದ ರೇಬಿಸ್ ಲಸಿಕೆಯನ್ನು ಈ ದಿನದಂದು ನೀಡಲಾಗಿತ್ತು. ಆದ್ದರಿಂದ ಈ ದಿನದ ಮೂಲಕ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನಾಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಿಮ್ಸ್ ವಿಆರ್‌ಡಿಎಲ್ ಸಹ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಕೊಪ್ಪದ್, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುನೀಲ್ ಕುಮಾರ್ ಮಾತನಾಡಿದರು.

ವಿಡಿಎಲ್ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಹರ್ಷವರ್ಧನ್, ಸಿಮ್ಸ್‌ನ ಡಾ.ಪ್ರವೀಣ್ ಭಟ್, ಡಾ.ಕವಿತಾ ರಾಣಿ, ಪಶು ವೈದ್ಯಾಧಿಕಾರಿ ಡಾ.ರೇಖಾ, ನರ್ಸಿಂಗ್ ಕಾಲೇಜಿನ ಮೇರಿ, ಶುಶ್ರೂಕಾಧೀಕ್ಷಕಿ ಎಲಿಜಬೆತ್, ಆರೋಗ್ಯ ಇಲಾಖೆಯ ದೊಡ್ಡವೀರಪ್ಪ ಮತ್ತಿತರರಿದ್ದರು.

PREV