ಸೋಮರೆಡ್ಡಿ ಅಳವಂಡಿ ಕೊಪ್ಪಳ
ಇದುವರೆಗೂ ನಡೆಯುತ್ತಿದ್ದ ನೇಮಕಾತಿಯ ವೇಳೆ ಮೀಸಲು ಕೋರಿ ಅಭ್ಯರ್ಥಿ ಸಲ್ಲಿಸಿದ ಅರ್ಜಿಯು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ವೇಳೆ ಮೀಸಲು ಪ್ರಮಾಣಪತ್ರ ಸಲ್ಲಿಕೆ ಮಾಡುತ್ತಿರಲಿಲ್ಲ, ಅಷ್ಟೇ ಅಲ್ಲ ಮೀಸಲು ಪ್ರಮಾಣ ಪತ್ರ ದೋಷ ಪೂರಿತವಾಗಿದ್ದರೆ ಆ ಅಭ್ಯರ್ಥಿ ಅರ್ಜಿ ಸಾಮಾನ್ಯ ವರ್ಗಕ್ಕೆ ಪರಿಗಣಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಅವಕಾಶ ಇರುತ್ತಿತ್ತು. ಆದರೆ ಈಗ ಶಿಕ್ಷಣ ಇಲಾಖೆ ಹೊರಡಿಸಿರುವ ಅರ್ಜಿಯಲ್ಲಿ ಇದಕ್ಕೆ ಅವಕಾಶ ಇಲ್ಲದೆ ಇರುವುದು ಅಭ್ಯರ್ಥಿಗಳನ್ನು ಚಿಂತೆಗೀಡು ಮಾಡಿದೆ.
ಎಸ್ಸಿ, ಎಸ್ಟಿ, ಒಬಿಸಿ ಸೇರಿದಂತೆ ಕನ್ನಡ ಮಾಧ್ಯಮ ಗ್ರಾಮೀಣ ಸೇರಿದಂತೆ ಹತ್ತಾರು ಬಗೆಯ ಮೀಸಲು ಬಯಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನವೇ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ನೇಮಕಾತಿ ಪ್ರಕ್ರಿಯೆಯಿಂದಲೇ ದೂರಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಯಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ವಿವಾದಾತ್ಮಕ ಅಧಿಸೂಚನೆ ವಿಧಿಸಲಾಗಿದೆ. ಇದುವೇ ಈಗ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆತಂಕ ಪಡುವಂತಾಗಿದೆ.ಏನಿದು ಸಮಸ್ಯೆ: ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ವಿಧಿಸಿರುವ ಷರತ್ತುಗಳಿಗೆ ಮೀಸಲಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂಕಟ ತಂದಿರುವ ಸಾಧ್ಯತೆ ಎದುರಾಗಿದೆ. ಎಸ್ಸಿ, ಎಸ್ಟಿ ಒಬಿಸಿ ಕನ್ನಡ ಮಾಧ್ಯಮ, ಗ್ರಾಮೀಣ ಸೇರಿದಂತೆ ಯಾರೇ ಮೀಸಲಾತಿ ಬಯಸಿ ಅರ್ಜಿ ಸಲ್ಲಿಸುವ ವೇಳೆ ಅರ್ಜಿ ಭರ್ತಿ ಮಾಡಿದ ಮೀಸಲು ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಹೀಗೆ ಸಲ್ಲಿಸಿದ ಮೀಸಲಾತಿ ಪ್ರಮಾಣ ಪತ್ರಗಳು ದೋಷದಿಂದ ತಿರಸ್ಕಾರವಾದರೆ ಅವರ ಇಡೀ ಅರ್ಜಿಯೇ ತಿರಸ್ಕಾರವಾದಂತಾಗುತ್ತದೆ. ಹೀಗಾಗಿ ಸಾಮಾನ್ಯ ವರ್ಗದಲ್ಲಿ ನೇಮಕವಾಗುವ ಅರ್ಹತೆ ಇದ್ದರೂ ಅವರ ನೇಮಕಾತಿ ರದ್ದಾಗುತ್ತದೆ. ಹೀಗೆ ಪ್ರತಿ ಮೀಸಲು ಕುರಿತ ವಿವರಣೆ ಕೆಳಗೆ ಈ ಷರತ್ತು ವಿಧಿಸಲಾಗಿದೆ.
ಒಬ್ಬನೇ ಅಭ್ಯರ್ಥಿ ಹಲವಾರು ಮೀಸಲು ಕೋರಿರುತ್ತಾರೆ. ಉದಾಹರಣೆಗೆ ಎಸ್ಸಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಕನ್ನಡ ಮಾಧ್ಯಮ, ಗ್ರಾಮೀಣ ಸೇರಿದಂತೆ ಹಲವಾರು ಮೀಸಲು ಬಯಸಿ ಅರ್ಜಿ ಸಲ್ಲಿಸಿರುತ್ತಾರೆ. ಇದರಲ್ಲಿ ಯಾವುದಾದರೂ ಒಂದು ಮೀಸಲು ಪ್ರಮಾಣಪತ್ರದಲ್ಲಿ ದೋಷವಾದರೇ ಇಡೀ ಆಯ್ಕೆ ಪ್ರಕ್ರಿಯೆಯಿಂದಲೇ ಹೊರಗೆ ಉಳಿಯಬೇಕಾಗುತ್ತದೆ ಎನ್ನುವುದೇ ಈಗ ಚರ್ಚೆಗೆ ಗ್ರಾಸವಾಗಿದೆ.
371 ಜೆ ಪ್ರಮಾಣ ಪತ್ರ: ವಿವಾಹಿತ ಮಹಿಳೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಈಗಾಗಲೇ ವಿದ್ಯಾರ್ಥಿಯಾಗಿದ್ದಾಗ ಜೀವಿತಾವಧಿ 371 ಜೆ ಪ್ರಮಾಣಪತ್ರ ನೀಡಲಾಗಿದ್ದು, ಅದವೇ ಉರ್ಜಿತವೇ ಎನ್ನುವುದನ್ನು ಸ್ಪಷ್ಟಪಡಿಸಬೇಕು.