ಹೊಸಪೇಟೆ: ಜಿಲ್ಲೆಯಲ್ಲಿ ಅಡುಗೆ ಸಿಲಿಂಡರ್‌ನ ಸುರಕ್ಷತಾ ಮಾನದಂಡಗಳನ್ನು ಸಾರ್ವನಿಕರಿಗೆ ತಿಳಿಸುವ ಮೂಲಕ ಯಾವುದೇ ರೀತಿಯ ಅವಘಡ ಸಂಭವಿಸಿದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಡುಗೆ ಸಿಲಿಂಡರ್ ವಿತರಣೆ, ಸಾಗಾಣಿಕೆ ಮತ್ತು ಸಂಗ್ರಹಣೆ ಮಾಡುವ ಗ್ಯಾಸ್ ಏಜೆನ್ಸಿಗಳ ನಿರ್ವಹಣೆ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಡುಗೆ ಸಿಲಿಂಡರ್ ಗೃಹ ಬಳಕೆದಾರರು ಅತ್ಯಂತ ತುರ್ತು ಸಮಯದಲ್ಲಿ 1906 ಟೋಲ್ ಫ್ರೀ ಸಂಖ್ಯೆಯನ್ನು ಬಳಕೆ ಮಾಡಬೇಕು. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಗೃಹಬಳಕೆ ಅನಿಲ ಗ್ರಾಹಕರಿಂದ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಬಾರದು. ಗ್ರಾಹಕರಿಂದ ಯಾವುದೇ ದೂರುಗಳು ಬಂದ ತಕ್ಷಣ ಕೂಡಲೇ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಏಜೆನ್ಸಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಗ್ಯಾಸ್ ಸಿಲಿಂಡರ್ ಗಳನ್ನು ಬುಕಿಂಗ್ ಮಾಡಿದ ನಂತರ 48 ಗಂಟೆಯೊಳಗೆ ಪೂರೈಸಬೇಕು ಎಂದರು.
ಗೃಹಣಿಯರಿಗೆ ಅಡುಗೆ ಸಿಲಿಂಡರ್‌ನ ಬಳಕೆಯ ಬಗ್ಗೆ ಮಾಹಿತಿಯನ್ನು ನೀಡಬೇಕು. ಪ್ರತಿ ಗ್ಯಾಸ್ ಏಜೆನ್ಸಿಗಳು ತಮ್ಮ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಮತ್ತು ವಾರ್ಡ್ ಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಬೇಕು. ಇತ್ತೀಚೆಗೆ ಗಾದಿಗನೂರು ಗ್ರಾಮದಲ್ಲಿ ನಡೆದ ಸಿಲಿಂಡರ್ ಸ್ಫೋಟ ಪ್ರಕರಣದಿಂದ ಎಚ್ಚೆತ್ತುಕೊಳ್ಳಬೇಕಿದೆ. ಇಂತಹ ಘಟನೆ ಮರುಕಳಿಸದಂತೆ ಜಾಗ್ರತೆ ವಹಿಸಬೇಕು ಎಂದರು.
ಆಹಾರ ಇಲಾಖೆಯ ಉಪನಿರ್ದೇಶಕ ರಿಯಾಜ್ ಮಾತನಾಡಿ, ಗೃಹ ಸಿಲಿಂಡರ್ ಬಳಕೆದಾರರು ಗ್ಯಾಸ್ ಸ್ಟವ್ ಪೈಪ್ ಆಗ್ಗಿಂದಾಗೆ ಬದಲಿಸಬೇಕು. ಅಧಿಕೃತ ಗ್ಯಾಸ್ ಸರಬರಾಜುದಾರರಿಂದಲೇ ಗ್ಯಾಸ್ ಖರೀದಿ ಮಾಡಿಸಬೇಕು. ಸಿಲಿಂಡರ್ ನಲ್ಲಿ ಆಯಾ ಕಂಪನಿಯ ಸೀಲ್ ಮತ್ತು ಕ್ಯಾಪ್ ಸರಿಯಾಗಿ ಇದೆಯೇ ಎಂದು ಪರಿಶೀಲಿಸಬೇಕು. ಮನೆಗಳಲ್ಲಿ ಸಿಲಿಂಡರ್ ಅನ್ನು ಗಾಳಿಯಾಡುವ ಜಾಗದಲ್ಲಿ ಇಡಬೇಕು. ರಾತ್ರಿ ಮಲಗುವ ವೇಳೆ ಗ್ಯಾಸ್ ಸ್ಟವ್ ಆಫ್ ಆಗಿದಿಯೇ ಎಂದು ಪರಿಶೀಲಿಸಬೇಕು. ಸಿಲಿಂಡರ್ ಬಳಕೆಗೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದರು.ಈ ಸಭೆಯಲ್ಲಿ ಗ್ಯಾಸ್ ಏಜೆನ್ಸಿ ಮಾಲೀಕರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.