ಕೊಪ್ಪಳ: ಮಕ್ಕಳಲ್ಲಿ ಕೀಳರಿಮೆ ಉಂಟು ಮಾಡದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಶಿವಲೀಲಾ ವನ್ನೂರು ಹೇಳಿದರು.
ಮಕ್ಕಳು ಮತ್ತು ಮಹಿಳೆಯರು ಭಿಕ್ಷಾಟನೆಗೆ ತೆರಳದಂತೆ ಕುಟುಂಬ ಹಾಗೂ ಸ್ಥಳಿಕರು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರದಿಂದ ಮಹಿಳೆಯರಿಗಾಗಿ ದೊರೆಯುವಂತಹ ಉದ್ಯೋಗಿನಿ ಯೋಜನೆ, ಗೃಹಲಕ್ಷ್ಮೀ ಯೋಜನೆಗಳ ಲಾಭ ಪಡೆದುಕೊಂಡು ವಿವಿಧ ಕೌಶಲ್ಯ ಕಲಿತು ವ್ಯಾಪಾರ ಮಾಡುವ ನಿಟ್ಟಿನಲ್ಲಿ ಸ್ವಾಲಂಬಿ ಬದುಕು ಮಾಡಬೇಕು.ಮಕ್ಕಳಿಗೆ ಇರುವಂತಹ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009ರ ಅಡಿಯಲ್ಲಿ ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತವಾಗಬಾರದು. ತಂದೆ-ತಾಯಿ ತೀರಿದ ಮಗು ಪೋಷಕರೊಂದಿಗೆ ವಾಸವಾಗಿದ್ದು ಶಾಲೆಗೆ ಹೋಗುತ್ತಿದ್ದರೆ ಅಂತಹ ಮಕ್ಕಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಪ್ರಾಯೋಜಿಕತ್ವ ಯೋಜನೆ ಸೌಲಭ್ಯ ಪಡೆದು ಆರ್ಥಿಕವಾಗಿ ಸಂಕಷ್ಟದಿಂದ ದೂರವಾಗುವಂತೆ ಅನುಕೂಲತೆ ಪಡೆಯಬೇಕು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ-2012 ರಲ್ಲಿ ಜಾರಿಗೆ ಬಂದಿದ್ದು, ಯಾವುದೇ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದರೆ ಮತ್ತು ಮಕ್ಕಳ ದೇಹದ ಮೇಲೆ ಅಸುರಕ್ಷತ ಸ್ಪರ್ಶ ಮಾಡಿದರೆ ಘಟನೆಯ ಸ್ವರೂಪದ ಆಧಾರದ ಮೇಲೆ 20 ರಿಂದ ಜೀವಾವಧಿ ಮತ್ತು ಗಲ್ಲು ಶಿಕ್ಷೆ ಸಹ ವಿಧಿಸಬಹುದು ಎಂದರು.
ಅಕ್ಕಪಡೆ ಪೊಲೀಸ್ ಅಧಿಕಾರಿ ಸಾವಿತ್ರಿ ಡಿ. ಮಾತನಾಡಿ, ಜಿಲ್ಲೆಯಲ್ಲಿ ರೈಲ್ವೆ ಸ್ಟೇಷನ, ಬಸ್‌ನಿಲ್ದಾಣ, ದೇವಸ್ಥಾನ, ಸಿನಿಮಾ ಟಾಕೀಜ್, ಪ್ರವಾಸಿ ತಾಣ, ಮಾಲ್, ಬೀದಿ, ಶಾಲಾ ಕಾಲೇಜ್ ಮತ್ತು ಕುಟುಂಬ ಹಾಗೂ ಸಮುದಾಯಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ದೈಹಿಕ, ಲೈಂಗಿಕ, ಮಾನಸಿಕ ಹಿಂಸೆಗಳು ಏನಾದರು ಯಾವುದೇ ವ್ಯಕ್ತಿ ನೀಡಿದಲ್ಲಿ ಅಕ್ಕಪಡೆಯ ಸಂಖ್ಯೆ 181ಗೆ ಕರೆ ಮಾಹಿತಿ ನೀಡಿದರೆ ಆ ಸ್ಥಳಕ್ಕೆ ಅಕ್ಕಪಡೆಯ ತಂಡ ರಕ್ಷಣೆಗಾಗಿ ಧಾವಿಸುತ್ತದೆ ಹಾಗೂ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ತುರ್ತು ಪೊಲೀಸ್ ಉಚಿತ ಸಹಾಯವಾಣಿ ಸಂಖ್ಯೆ 112 ಗೂ ಸಹ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿ ಸಂಯೋಜಕ ಶರಣಪ್ಪಮಾತನಾಡಿ, ಬಾಲ್ಯ ವಿವಾಹ, ಬಾಲಕಾರ್ಮಿಕ, ಮಕ್ಕಳ ಭಿಕ್ಷಾಟನೆ ಲೈಂಗಿಕ ದೌರ್ಜನ್ಯ, ಕಾಣಿಯಾದ ಮಗು, ಮಗುಪತ್ತೆ, ಬಿದಿಯಲ್ಲಿ ಬಿಸಾಕಿದ ಮಗು, ಶಾಲೆಯಿಂದ ಹೊರಗುಳಿದ ಮಕ್ಕಳು ಕಂಡುಬಂದಲ್ಲಿ ದಿನದ 24 ಗಂಟೆಗಳ ಕಾಲ ಚಾಲನೆಯಲ್ಲಿರುವ ಉಚಿತ ದೂರವಾಣಿ ಸಂಖ್ಯೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಟ್ಟು ಮಗುವಿನ ರಕ್ಷಣೆ ವಿವಿಧ ಇಲಾಖೆಯ ಸಹಯೋಗದೊಂದಿಗೆ ಮಾಡಲಾಗುತ್ತದೆ ಎಂದರು.