ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲು ಜಿಲ್ಲೆಯ ಎಲ್ಲಾ ತಾಲೂಕಿನ ತಹಸೀಲ್ದಾರರು, ತಾಪಂ ಇಒಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ತಾಪಂ ಇಒಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕೆಲಸ ಮಾಡಿದರೆ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆಗಳಾಗುವುದಿಲ್ಲ. ತಹಸೀಲ್ದಾರರು ಈ ಕುರಿತು ತಮ್ಮ ತಾಲೂಕಿನ ಶಾಸಕರ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆಸಿ ಯಾವ ಯಾವ ಗ್ರಾಮಗಳಲ್ಲಿ ಮುಂದೆ ನೀರಿನ ಸಮಸ್ಯೆ ಆಗಬಹುದು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಬೇಕೆಂದರು.ತಾಪಂ ಇಒಗಳು ವಾಟರಮ್ಯಾನ್‌ಗಳ ಸಭೆ ಕರೆದು ಅವರಿಗೆ ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯಕ್ಕೆ ಗ್ರಾಮಗಳಲ್ಲಿ ನೀರು ಬಿಡುವುದರ ಕುರಿತು ತಿಳಿಸಬೇಕು. ಗ್ರಾಮ ಸೇವಕರು ಮತ್ತು ಪಿಡಿಒಗಳು ನೀರಿನ ಸಮಸ್ಯೆಗಳಿರುವ ಗ್ರಾಮಗಳ ಮಾಹಿತಿಯನ್ನು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಬೇಕೆಂದರು.
ಅಧಿಕಾರಿಗಳು ಖುದ್ದಾಗಿ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆಗಳಿಗೆ ಎಂಬುದರ ನಿಖರ ಮಾಹಿತಿ ಕೊಡಬೇಕು. ಸಮಸ್ಯೆಗಳಿರುವ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಅಥವಾ ನೀರಿನ ಟ್ಯಾಂಕರ್, ತೆರೆದ ಬಾವಿಗಳ ಮೂಲಕ ಜನರಿಗೆ ನೀರು ಒದಗಿಸಬಹುದೇ ಎಂಬ ಮಾಹಿತಿಯನ್ನು ಅಧಿಕಾರಿಗಳು ಮುಂಚಿತವಾಗಿ ಸಂಗ್ರಹಿಸಬೇಕು ಮತ್ತು ಯಾವುದೇ ಕಾರಣಕ್ಕೆ ನೆಪ ಹೇಳುವ ಹಾಗಿಲ್ಲ ಕುಡಿಯುವ ನೀರಿಗೆ ಹಣದ ಕೊರತೆಯಿಲ್ಲ ಎಂದರು.
ನೀರಿನ ಮೂಲ ಇಲ್ಲದ ಕಡೆ ಖಾಸಗಿ ಕೊಳವೆಬಾವಿ ಮತ್ತು ತೆರೆದ ಬಾವಿಗಳ ಮಾಹಿತಿಯನ್ನು ಮುಂಚಿತವಾಗಿ ಸಂಗ್ರಹಿಸಿ ಮತ್ತು ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಿ ತಾಲೂಕು ಮಟ್ಟದಲ್ಲಿ ತಹಸೀಲ್ದಾರರಿಗೆ 5 ಲಕ್ಷ ರು. ವರೆಗೆ ಹಣ ಖರ್ಚು ಮಾಡಬಹುದಾಗಿದೆ. ಕುಡಿಯುವ ನೀರಿಗೆ ತುರ್ತು 2 ಲಕ್ಷ ರು.ಗಳವರೆಗೆ ಖರ್ಚು ಮಾಡಬಹುದು ಎಂದರು.
ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಿ ತಾಂತ್ರಿಕ ಕಣ್ಗಾವಲಿಗೆ ಸೂಚನೆ:ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವಾಗ ಅವುಗಳಿಗೆ ಜಿಪಿಎಸ್ ಅಳವಡಿಸಿ ಅದರಿಂದ ಯಾವ ಯಾವ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗಿದೆ ಎಂಬ ಮಾಹಿತಿ ಸಿಗುತ್ತದೆ. ಗುತ್ತಿಗೆ ಪಡೆದ ಖಾಸಗಿ ಕೊಳವೆಬಾವಿ, ತೆರೆದ ಬಾವಿಗಳು ಮತ್ತು ಟ್ಯಾಂಕರ್‌ಗಳ ಮಾಲೀಕರಿಗೆ 15 ದಿನಗಳಿಗೊಮ್ಮೆ ಹಣ ಪಾವತಿಸಬೇಕು ಹಾಗೂ ಎಷ್ಟು ಬೋರ್‌ವೆಲ್, ಬಾವಿ, ಟ್ಯಾಂಕರ್‌ಗಳ ಮೂಲಕ ವಿವಿಧ ಗ್ರಾಮಗಳಲ್ಲಿ ನೀರು ಒದಗಿಸಲಾಗುತ್ತಿದೆ ಎಂಬ ಮಾಹಿತಿ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಬೇಸಿಗೆ ಆರಂಭವಾಗಿರುವುದರಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಅಂದಾಗ ಮಾತ್ರ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಹೇಳಿದರು.