ಹುಬ್ಬಳ್ಳಿ:
ಉತ್ತರ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆ ಕೆಎಂಸಿಆರ್‌ಐನಲ್ಲಿ ಯಾವುದೇ ಸಂದರ್ಭದಲ್ಲಿ ಔಷಧಿ ಕೊರತೆ ಆಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.ಮಂಗಳವಾರ ಡೈಗ್ನೋಸ್ಟಿಕ್ ಡಿಜಿಟಲ್ ಲ್ಯಾಬೋರೇಟರಿ, ಬ್ರೇಕಿ ಥೆರಪಿ ಕ್ಯಾನ್ಸರ್ ಘಟಕ, ನವೀಕೃತ ಮಾಡ್ಯೂಲರ್ ಓಟಿ, ಅನಸ್ಥೇಶಿಯಾ ವಿಭಾಗ, ಕ್ರೀಡಾ ಸಂಕೀರ್ಣ ಮತ್ತು ಇತರ ಕಾಮಗಾರಿಗಳ ಲೋಕಾರ್ಪಣೆ ಮಾಡಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ಕಾರಣಕ್ಕೂ ಹೊರಗಿನ ಔಷಧಿ ಬರೆದುಕೊಡದಂತೆ ಸೂಚಿಸಿದ ಅವರು, ಇಲ್ಲಿಯೇ ಎಲ್ಲ ರೀತಿಯ ಔಷಧಿ ದಾಸ್ತಾನು ಮಾಡಿ ರೋಗಿಗಳಿಗೆ ವಿತರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ರೋಬೋಟಿಕ್ ಸರ್ಜರಿ ಮತ್ತು ಪಿಇಟಿ ಸಿಟಿ (ಪೆಟ್ ಸಿಟಿ) ಸ್ಕಾನ್ ಸೌಲಭ್ಯಗಳೆರಡರಲ್ಲಿ ಒಂದನ್ನು ಕಲ್ಪಿಸುವುದಾಗಿ ಹೇಳಿದ ಅವರು, ಆಸ್ಪತ್ರೆ ಸಿಬ್ಬಂದಿಗೆ ಬಡ್ತಿ, ಸೇವಾ ಹಿರಿತನದಂತ ಸೌಲಭ್ಯಗಳನ್ನು ಪ್ರತಿವರ್ಷ ತಪ್ಪದಂತೆ ನೀಡುತ್ತೇವೆ. ಎಲ್ಲ ವಿಭಾಗಗಳ ಮುಖ್ಯಸ್ಥರ ಕುಂದುಕೊರತೆ ಆಲಿಸಿ ಅವುಗಳನ್ನು ಬಗೆಹರಿಸಿ. ಇದರಿಂದ ಆಸ್ಪತ್ರೆ ಕಾರ್ಯನಿರ್ವಹಣೆಗೆ ಉತ್ತಮವಾಗಿರುತ್ತದೆ. ಬಡ್ತಿ, ಗುತ್ತಿಗೆ ನೌಕರರಿಗೆ ವೇತನ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ನೋಡಿಕೊಳ್ಳಿ ಎಂದರು.
ಆಸ್ಪತ್ರೆ ನವೀಕರಣ ಕಾಮಗಾರಿ ಅಗತ್ಯವಿದೆ. ಸಿಎಸ್‌ಆರ್ ಸೇರಿ ಇತರ ಅನುದಾನದಲ್ಲಿ ನವೀಕರಣ ಕಾಮಗಾರಿ ಕೈಗೊಂಡು ಸ್ವಚ್ಛತೆಗೆ ಕ್ರಮಕೊಳ್ಳುವಂತೆ ಸೂಚಿಸಿದರು. ಗುತ್ತಿಗೆ ಪಡೆದವರಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳಿ. ಸಂಸ್ಥೆಯಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದು ಮಾಸ್ಟರ್ ಪ್ಲ್ಯಾನ್ ರೂಪಿಸಿ ವಾಹನಗಳ ಪಾರ್ಕಿಂಗ್, ಉದ್ಯಾನ ಸೇರಿ ಮತ್ತಿತರ ಸೌಲಭ್ಯ ಕಲ್ಪಿಸಿ ಎಂದು ಆಡಳಿತ ಮಂಡಳಿಗೆ ಸೂಚಿಸಿದರು.ಸರ್ಕಾರದಿಂದ ಪ್ರತಿಷ್ಠಿತ ಕೆಎಂಸಿಆರ್‌ಐಗೆ ಸಿಎಂ ಜತೆ ಮತ್ತಷ್ಟು ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಆಸ್ಪತ್ರೆಗೆ ಬರುವ ಬಡವರು ಆರೋಗ್ಯ ಕಾಪಾಡುವ ಕೆಲಸ ನಾವು ಮಾಡಬೇಕು ಎಂದು ಸೂಚಿಸಿದರು.
ಈ ವೇಳೆ ಶಾಸಕರಾದ ಎನ್.ಎಚ್. ಕೋನರಡ್ಡಿ ಮತ್ತು ಮಹೇಶ ಟೆಂಗಿನಕಾಯಿ ಮಾತನಾಡಿ, ಕೊರೋನಾ ಹಾವಳಿ ಸಂದರ್ಭದಲ್ಲಿ ಕೆಎಂಸಿಆರ್‌ಐ ಸಂಸ್ಥೆಯ ವೈದ್ಯರು ಸಲ್ಲಿಸಿದ ಸೇವೆ ಶ್ಲಾಘಿಸಿದರು. ಅಲ್ಲದೆ, ಸಚಿವರಿಗೆ ಸಂಸ್ಥೆಗೆ ಮತ್ತಷ್ಟು ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಪ್ರಾಂಶುಪಾಲ ಗುರುಶಾಂತಪ್ಪ ಯಲಗಚ್ಚಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಕೆಎಂಸಿಆರ್‌ಐ ಆಡಳಿತ ಮಂಡಳಿ ಸದಸ್ಯ ಮಲ್ಲಪ್ಪ ರೋಣದ, ವೈದ್ಯರು, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.