ಹೆದ್ದಾರಿ ಅಪಘಾತದಲ್ಲಿ ವ್ಯಕ್ತಿ ಸಾವು: ಶವ ರಸ್ತೆಯಲ್ಲಿಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

KannadaprabhaNewsNetwork |  
Published : Apr 23, 2025, 12:33 AM IST
22ಕೆಎಂಎನ್ ಡಿ29 | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗ್ರಾಮಗಳ ಬಳಿ ಹೆದ್ದಾರಿಗೆ ಸ್ಪೀಡ್‌ ಬ್ರೇಕರ್ (ಹಂಪ್ಸ್)ಗಳನ್ನು ಹಾಕದ ಪರಿಣಾಮವಾಗಿ ಪದೇ ಪದೇ ಅಪಘಾತಗಳು ಸಂಭವಿಸಿ ಸಾವು ನೋವು ಆಗುತ್ತಿವೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಶವವನ್ನು ರಸ್ತೆಯಲ್ಲಿಟ್ಟು ತಾಲೂಕಿನ ಹಿರೇಮರಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಶ್ರೀರಂಗಪಟ್ಟಣ- ಜೇವರ್ಗಿ ಹೆದ್ದಾರಿಯ ಗ್ರಾಮದ ಗೇಟ್ ಬಳಿ ಮಂಗಳವಾರ ನಡೆದಿದೆ.

ಗ್ರಾಮದ ನಿವಾಸಿ ಶಿವಶಂಕರ್(45) ಇತ್ತೀಚೆಗೆ ಹೆದ್ದಾರಿಯ ಹಿರೇಮರಳಿ ಗೇಟ್ ಬಳಿ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶಿವಶಂಕರ್ ಮಂಗಳವಾರ ಮೃತಪಟ್ಟರು. ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಾಕದ ಪರಿಣಾಮವಾಗಿ ಇಂತಹ ಅಪಘಾತಗಳು ಸಂಭವಿಸಿ ಸಾವು ನೋವು ಸಂಭವಿಸುತ್ತಿವೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಹಿರೇಮರಳಿ ಗ್ರಾಮಸ್ಥರು ಮೃತ ದೇಹವಿಟ್ಟು ಆ್ಯಂಬುಲೆನ್ಸ್ ಅನ್ನು ರಸ್ತೆ ಮಧ್ಯೆ ನಿಲ್ಲಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗ್ರಾಮಗಳ ಬಳಿ ಹೆದ್ದಾರಿಗೆ ಸ್ಪೀಡ್‌ ಬ್ರೇಕರ್ (ಹಂಪ್ಸ್)ಗಳನ್ನು ಹಾಕದ ಪರಿಣಾಮವಾಗಿ ಪದೇ ಪದೇ ಅಪಘಾತಗಳು ಸಂಭವಿಸಿ ಸಾವು ನೋವು ಆಗುತ್ತಿವೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು. ಪ್ರತಿಭಟನೆಯಿಂದ ರಸ್ತೆಯ ವಾಹನ ಸಂಚಾರದಲ್ಲಿ ಗಂಟೆಗೂ ಅಧಿಕ ಕಾಲ ವ್ಯತ್ಯಯ ಉಂಟಾಯಿತು.

ವಿಷಯ ತಿಳಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೈಸೂರು ವಿಭಾಗದ ಎಇಇ ರೂಪ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರು ಸಮಸ್ಯೆ ಆಲಿಸಿದರು. ಒಂದು ದಿನದಲ್ಲಿ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ಕೊಟ್ಟ ನಂತರ ಪ್ರತಿಭಟನೆ ಹಿಂತೆಗೆದುಕೊಂಡು, ಶವವನ್ನು ಹಿರೇಮರಳಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ, ಗ್ರಾಮದ ಹೊರವಲಯದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಎಚ್.ಎನ್.ಮಂಜುನಾಥ್, ಸ್ನೇಹಲೋಕ ಸತೀಶ್, ವಿಷ್ಣು ವಿಠಲ, ಪೇಂಟರ್ ಅಶೋಕ್ ಇತರರು ಇದ್ದರು.

ಸಾರಿಗೆ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ, ಮೂವರು ನ್ಯಾಯಾಂಗ ಬಂಧನಕ್ಕೆ

ಮದ್ದೂರು:

ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಯುವಕರ ಗುಂಪು ಸಾರಿಗೆ ಸಂಸ್ಥೆ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿ ತರಮನಕಟ್ಟೆ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದೆ.

ರಾಮನಗರ ಜಿಲ್ಲೆಯ ಮಾಗಡಿ ಸಾರಿಗೆ ಸಂಸ್ಥೆ ಬಸ್ ಚಾಲಕ ವೈ.ಪಿ.ಸ್ವಾಮಿ ಹಾಗೂ ನಿರ್ವಾಹಕ ಸಿ.ಮಹೇಶ್ ಸೇರಿದಂತೆ ಹಲವು ಪ್ರಯಾಣಿಕರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದೆ ಎಂದು ದೂರು ನೀಡಲಾಗಿದೆ.

ಘಟನೆ ಸಂಬಂಧ ಕೊಪ್ಪ ಠಾಣೆ ಪೊಲೀಸರು ತರಮನಕಟ್ಟೆ ಗ್ರಾಮದ ಮನೋಜ್, ಮೋಹನ್ ಹಾಗೂ ಸಂತೋಷ್ ಎಂಬುವವರನ್ನು ಬಂಧಿಸಿ ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಾಗಡಿ ಡಿಪೋಗೆ ಸೇರಿದ ಸಾರಿಗೆ ಸಂಸ್ಥೆ ಬಸ್ಸು ಮಂಡ್ಯ ತಾಲೂಕಿನ ಬಸರಾಳು ಮಾರ್ಗವಾಗಿ ಹೊಸಗಾವಿ ಕೌಡ್ಲೆ ಗ್ರಾಮದ ಮೂಲಕ ತರಮನಕಟ್ಟೆ ಕಾಲೋನಿಗೆ ಬಂದವೇಳೆ ಭಾನುವಾರ ಸಂಜೆ 5.30 ಸಮಯದಲ್ಲಿ ನಿಲುಗಡೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದ ಕಾರಣ ನಿರ್ವಾಹಕ ಮಹೇಶ್ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿರಾಕರಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಯುವಕರ ಗುಂಪು ನಿರ್ವಾಹಕ ಮಹೇಶ್‌ಗೆ ಅವಾಜ್ ಹಾಕಿ ಮಾತಿನ ಚಕಮಕಿಗೆ ಇಳಿದಿದ್ದಾರೆ. ಈ ವೇಳೆ ಮಹೇಶ್ ರಕ್ಷಣೆಗೆ ಧಾವಿಸಿದ ಚಾಲಕ ವೈ.ಪಿ. ಸ್ವಾಮಿ ಹಾಗೂ ನಿರ್ವಾಹಕ ಮಹೇಶ್ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದೆ. 2 ಗುಂಪಿನ ಜಗಳ ಬಿಡಿಸಲು ಬಂದ ಕೆಲ ಪ್ರಯಾಣಿಕರ ಮೇಲೆ ಸಹ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''