ಕೂಡ್ಲಿಗಿಯಲ್ಲಿಂದು ಊರು ತೊರೆಯುವ ಗುಳೇದ ಲಕ್ಕಮ್ಮ ಜಾತ್ರೆ!

KannadaprabhaNewsNetwork |  
Published : Apr 23, 2025, 12:33 AM IST
ಊರು ತೊರೆಯುವ ಗುಳೇದ ಲಕ್ಕಮ್ಮ ಜಾತ್ರೆ ನೋಟ  | Kannada Prabha

ಸಾರಾಂಶ

ಜಾತ್ರೆಯಲ್ಲಿ ಗುಳೇದ ಲಕ್ಕಮ್ಮದೇವಿಗೆ ಮುಸ್ಲಿಂ ವ್ಯಕ್ತಿಯೇ ಕಾವಲಿರುವ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಹಬ್ಬ ಇದಾಗಿದೆ.

ಹಿಂದೂ ಹಬ್ಬಕ್ಕೆ ಮುಸ್ಲಿಂ ವ್ಯಕ್ತಿಯ ಕಾವಲು, ಆತ ಹಾಕುವ ಬೆಂಕಿಯಿಂದಲೇ ಎಲ್ಲರ ಮನೆಯಲ್ಲಿ ದೀಪ ಬೆಳಗಲಿದೆಭೀಮಣ್ಣ ಗಜಾಪುರ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಪಟ್ಟಣದಲ್ಲಿ ಇಂದು (ಏ.23ರಂದು) ಗುಳೇದ ಲಕ್ಕಮ್ಮ ಜಾತ್ರೆಯ ಸಂಭ್ರಮ. ಇಡೀ ಊರಿನ ಜನತೆ ಊರು ತೊರೆಯುವ ಜಾತ್ರೆ ಇದಾಗಿದ್ದು, ಮಕ್ಕಳು, ವೃದ್ದರು, ಸಾಕುಪ್ರಾಣಿಗಳು ಸೇರಿದಂತೆ ಎಲ್ಲರೂ ತಮ್ಮ ಮನೆ ಮಠಗಳನ್ನು ಬಿಟ್ಟು ಊರ ಹೊರಗಿನ ಹುಣಿಸೆ ತೋಪಿನಡಿ ಇಡೀ ದಿನ ಕಳೆದು ಪುನಃ ಸಂಜೆ ಊರಿಗೆ ಬರುತ್ತಾರೆ. ಜಾತ್ರೆಯಲ್ಲಿ ಗುಳೇದ ಲಕ್ಕಮ್ಮದೇವಿಗೆ ಮುಸ್ಲಿಂ ವ್ಯಕ್ತಿಯೇ ಕಾವಲಿರುವ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಹಬ್ಬ ಇದಾಗಿದೆ.

ಜಾತಿ, ಧರ್ಮ ಎಂದು ಧರ್ಮಾಂಧತೆ ಮೆರೆಯುವ ಇಂದಿನ ದಿನಗಳಲ್ಲಿ ಸೌಹಾರ್ತತೆಯಿಂದ ಹಬ್ಬ ಆಚರಿಸುವುದು ಮಾತ್ರ ನೋಡುಗರಿಗೆ ಚಕಿತ ಮೂಡಿಸುತ್ತದೆ. ಇಂತಹದ್ದೊಂದು ಸಂಪ್ರದಾಯ ನಡೆದುಕೊಂಡು ಬಂದಿರುವುದು ಇಂದು ನಿನ್ನೆಯದಲ್ಲ. ತಲಾ ತಲಾಂತರ ವರ್ಷಗಳಿಂದ ಗುಳೇದ ಲಕ್ಕಮ್ಮ ದೇವಿಯ ಜಾತ್ರೆ ಇಲ್ಲಿ ನಡೆಯುತ್ತದೆ. ಪ್ರತಿ 3 ವರ್ಷಕ್ಕೊಮ್ಮೆ ಕೂಡ್ಲಿಗಿ ಪಟ್ಟಣ ಸೇರಿದಂತೆ ಈ ಭಾಗದ ಗ್ರಾಮೀಣ ಭಾಗದಲ್ಲಿ ನಡೆಯುವ ಗುಳೇದ ಲಕ್ಕಮ್ಮದೇವಿ ಜಾತ್ರೆ ಬೇರೆಲ್ಲ ಜಾತ್ರೆಗಿಂತ ವಿಭಿನ್ನವಾಗಿ ಕಾಣುತ್ತದೆ. ಇಲ್ಲಿ ಯಾರೂ ದೇವಿಗೆ ಪ್ರಾಣಿಬಲಿ ನೀಡುವುದಿಲ್ಲ. ಇಡೀ ಊರಿನ ಜನತೆ ಊರು ಖಾಲಿ ಮಾಡಿ ಊರ ಹೊರಗಿನ ಮರಗಳಡಿ ಗುಡಾರ ಕಟ್ಟಿಕೊಂಡು ಒಂದು ದಿನದ ಮಟ್ಟಿಗೆ ಪಿಕ್‌ನಿಕ್ ತರಹ ಕುಟುಂಬದ ಸದಸ್ಯರು ಜತೆಗೆ ಬೀಗರು ಸೇರಿಕೊಂಡು ಹಬ್ಬ ಆಚರಿಸುವುದನ್ನು ನೋಡುವುದೇ ಸೊಬಗು.

ರೊಟ್ಟಿ, ಕಾಳು ಪಲ್ಯ, ಸಿಹಿ ಪದಾರ್ಥ, ಕೆಲವರು ಮಾಂಸಾಹಾರ ಸೇರಿದಂತೆ ಇತರೆ ಭೋಜನ ಸವಿಯುವುದನ್ನು ನೋಡುವುದೇ ಸೊಬಗು. ಬೆಳಗ್ಗೆ ಎಲ್ಲರೂ ಮನೆ ಖಾಲಿ ಮಾಡಿಕೊಂಡು ಪುಟ್ಟಿಗಳಲ್ಲಿ ಧವಸಧಾನ್ಯ, ಇತರೆ ಅಡುಗೆ ಸಾಮಾನು ಹೊತ್ತುಕೊಂಡು ದನಕರು, ಕೋಳಿ, ನಾಯಿ, ಬೆಕ್ಕುಗಳನ್ನು ಸಹ ಕರೆದುಕೊಂಡು ಊರ ಹೊರಗೆ ಬರುವುದನ್ನು ನೋಡುವುದೇ ಚೆಂದ. ಹಗಲೆಲ್ಲ ಊರ ಹೊರಗೆ ಊಟ ಮಾಡಿಕೊಂಡು ಸಂಭ್ರಮಿಸಿ ಮತ್ತೆ ಸಂಜೆಗೆ ಮನೆ ಸೇರುವುದು ಸಂಪ್ರದಾಯ.

5 ಸಾವಿರಕ್ಕೂ ಹೆಚ್ಚು ಮನೆಗಳಿವೆ. ಮೇದಲ್ಲಿ ಕೂಡ್ಲಿಗಿಯ ಗ್ರಾಮದೇವತೆಯ ಜಾತ್ರೆ ಇರುವುದರಿಂದ ಅದಕ್ಕೂ ಮೊದಲು ಗುಳೇದ ಲಕ್ಕಮ್ಮ ಜಾತ್ರೆ ಆಚರಿಸುವುದು ರೂಢಿ. ಹೀಗಾಗಿ ಗುಳೇದ ಲಕ್ಕಮ್ಮನ ಜಾತ್ರೆಯನ್ನು ಈ ಬಾರಿ ಮತ್ತಷ್ಟು ಸಂಭ್ರಮದಿಂದ ಆಚರಿಸುತ್ತಾರೆ. ವಿವಿಧ ಭಕ್ಷ್ಯಭೋಜನ ಮಾಡಿಕೊಂಡು ಮರಗಳಿಗೆ ಜೋಕಾಲಿ ಕಟ್ಟಿಕೊಂಡು ಹೆಂಗಳೆಯರು ಜೋಕಾಲಿ ಆಡುವುದು, ಮಕ್ಕಳು ಹಾಡಿ, ಕುಣಿಯುವುದು ಈ ಜಾತ್ರೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಸಂಜೆ ಊರಿಗೆ ಮರಳುವ ಜನತೆ ಮುಸ್ಲಿಂ ವ್ಯಕ್ತಿ ಮಣಿಗಾರ ಎಂಬ ಆಯಾಗಾರ ದೇವಿಯ ಮುಂದೆ ಹಾಕಿರುವ ಬೆಂಕಿಯ ಕೆಂಡ ತೆಗೆದುಕೊಂಡು ಹೋಗಿ ಅದೇ ಕೆಂಡದಲ್ಲಿಯೇ ದೀಪ ಹಚ್ಚಿ ಎಲ್ಲ ಹಿಂದೂಗಳು ಮನೆ ಬೆಳಗುತ್ತಾರೆ. ಇಂತಹ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳುವುದೇ ಸೊಗಸು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''