ರಸ್ತೆ ಅಪಘಾತವಾಗದಂತೆ ಎಚ್ಚರಿಕೆ ವಹಿಸಿ: ಡಾ.ಮೀರಾ

KannadaprabhaNewsNetwork |  
Published : Nov 19, 2025, 01:00 AM IST
 ಮಂಡ್ಯದ ಜ್ಞಾನಸಾಗರ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ರಸ್ತೆ ಅಪಘಾತದಲ್ಲಿ ಬಲಿಯಾದವರ ಸ್ಮರಣಾರ್ಥ ವಿಶ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ. ಮೀರಾಶಿವಲಿಂಗಯ್ಯ ಮಾತನಾಡಿದರು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ವಾಹನ ಚಾಲನೆಯಲ್ಲಿರುವಾಗಲೇ ಮೊಬೈಲ್‌ನಲ್ಲಿ ಮಾತುಕತೆ, ವಾಟ್ಸಾಫ್‌, ರೀಲ್ಸ್, ಮೆಸೇಜ್ ನೋಡಿಕೊಂಡು ಹೋಗುವುದು ಹೆಚ್ಚಾಗುತ್ತದೆ, ಇಂತಹ ಸಂದರ್ಭಗಳಲ್ಲಿ ಅಪಘಾತ, ಅವಘಡಗಳು ಹೆಚ್ಚು ಸಂಭವಿಸುತ್ತವೆ, ಜೀವಹಾನಿ, ದೊಡ್ಡಮಟ್ಟದಲ್ಲಿ ದೇಹಕ್ಕೆ ಗಾಯಗಳು ಆಗುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸವಾರರು ವಾಹನಗಳಲ್ಲಿ ಸಂಚರಿಸುವಾಗ ಅಪಘಾತ ಆಗದಂತೆ ಎಚ್ಚರಿಕೆ ವಹಿಸುವಂತೆ ಸಂಕಲ್ಪ ಮಾಡುವ ಅಗತ್ಯವಿದೆ ಎಂದು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ ಹೇಳಿದರು.

ನಗರದಲ್ಲಿರುವ ಜ್ಞಾನಸಾಗರ ಕ್ಯಾಂಪಸ್‌ನಲ್ಲಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ, ಕಾಲೇಜಿನ ಯುವರೆಡ್ ಕ್ರಾಸ್ ಘಟಕ ಆಯೋಜಿಸಿದ್ದ ರಸ್ತೆ ಅಪಘಾತದಲ್ಲಿ ಬಲಿಯಾದವರ ಸ್ಮರಣಾರ್ಥ ವಿಶ್ವ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ವಾಹನ ಚಾಲನೆಯಲ್ಲಿರುವಾಗಲೇ ಮೊಬೈಲ್‌ನಲ್ಲಿ ಮಾತುಕತೆ, ವಾಟ್ಸಾಫ್‌, ರೀಲ್ಸ್, ಮೆಸೇಜ್ ನೋಡಿಕೊಂಡು ಹೋಗುವುದು ಹೆಚ್ಚಾಗುತ್ತದೆ, ಇಂತಹ ಸಂದರ್ಭಗಳಲ್ಲಿ ಅಪಘಾತ, ಅವಘಡಗಳು ಹೆಚ್ಚು ಸಂಭವಿಸುತ್ತವೆ, ಜೀವಹಾನಿ, ದೊಡ್ಡಮಟ್ಟದಲ್ಲಿ ದೇಹಕ್ಕೆ ಗಾಯಗಳು ಆಗುತ್ತಿವೆ ಎಂದರು.

ಇಂತಹ ಸೂಕ್ಷ್ಮ ವಿಚಾರವನ್ನು ಅರಿತ ವಿಶ್ವಸಂಸ್ಥೆಯು ರಸ್ತೆ ಅಪಘಾತದಲ್ಲಿ ಬಲಿಯಾದವರ ಸ್ಮರಣಾರ್ಥ ವಿಶ್ವ ದಿನಾಚರಣೆ ಮೂಲಕ ಅರಿವು ಹೆಚ್ಚಿಸುತ್ತಿದೆ, ಈ ನಿಟ್ಟಿನಲ್ಲಿ ಎಲ್ಲರೂ ಅಪಘಾತ, ಅವಘಡಗಳ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಬೇಕು ಎಂದರು.

ಅಂಕಿ ಅಂಶಗಳ ಪ್ರಕಾರ ಅತಿ ಹೆಚ್ಚು ಜನರು ಸಾವನ್ನಪ್ಪುತ್ತಿರುವುದು ಕಾಯಿಲೆಗಳಿಂದ ಅಲ್ಲ, ಅಪಘಾತ ಮತ್ತು ಅವಘಡಗಳಿಂದ ಹೆಚ್ಚಿನ ಪ್ರಾಣಹಾನಿ, ನೋವು ಉಂಟಾಗುತ್ತಿದೆ. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತಗಳು ತಡೆಗಟ್ಟಬೇಕು ಎಂದು ಸಲಹೆ ನೀಡಿದರು.

ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ನಿರ್ದೇಶಕ ಕೆ.ಟಿ.ಹನುಮಂತು ಮಾತನಾಡಿ, ಯುವಜನತೆ ವಾಹನಗಳನ್ನು ಅಡ್ಡಾದಿಡ್ಡಿ ಚಲಾಯಿಸುವುದು, ಅತಿ ವೇಗವಾಗಿ ಸಂಚರಿಸುವುದು, ವ್ಹೀಲಿಂಗ್‌ ಮಾಡುವುದು, ರಸ್ತೆ ನಿಯಮಗಳನ್ನು ಪಾಲಿಸದೇ ಇರುವುದು ಕೂಡ ಅಪಘಾತಗಳಿಗೆ ಕಾರಣವಾಗಿದೆ ಎಂದರು.

೨೦೨೫ರ ಘೋಷವಾಕ್ಯ ‘ಜೀವವು ಕಾರಿನ ಭಾಗವಲ್ಲ’ ಎಂಬುದಾಗಿ ವಿಶ್ವಸಂಸ್ಥೆ ಘೋಷಿಸಿದೆ, ಪ್ರಪಂಚದಲ್ಲಿ ಪ್ರತಿ ವರ್ಷ ೧.೧೯ ಮಿಲಿಯನ್ ಜನರು ರಸ್ತೆ ಅಪಘಾತಗಳಿಂದ ಸಾಯುತ್ತಿದ್ದಾರೆ, ಭಾರತದೇಶದಲ್ಲಿ ೪.೭ಲಕ್ಷ ಜನರು ಸಾವನ್ನಪ್ಪಿರುವ ಬಗ್ಗೆ ಕೇಂದ್ರ ಸರ್ಕಾರ ವರದಿ ಬಿಡುಗಡೆ ಮಾಡಿದೆ, ಇದು ಇನ್ನೂ ಹೆಚ್ಚಿರಬಹುದು, ಇಂತಹ ಸಾವುಗಳಿಂದ ಕುಟುಂಬಗಳು ಬೀದಿಗೆ ಬರುತ್ತವೆ, ಅನಾಥಭಾವ ಕಾಡುತ್ತದೆ ಎಂದು ವಿಷಾದಿಸಿದರು.

ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ನಿವೃತ್ತ ಅಧೀಕ್ಷಕ ಎಂ.ಜಿ.ಎನ್. ಪ್ರಸಾದ್ ಅವರು ಪ್ರಾತ್ಯಕ್ಷಿಕೆ ಮೂಲಕ ಸುಗಮ ಸಂಚಾರ, ರಸ್ತೆ ನಿಯಮಗಳು, ಅಪಘಾತ ಸಂಭವಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಆರ್.ಟಿ.ಓ ಕಚೇರಿಯ ಅಧಿಕಾರಿಗಳಾದ ಅಶೋಕ್, ವಿನೋದ್, ಪ್ರಾಂಶುಪಾಲ ಭಾವಾನಿಶಂಕರ್, ರೆಡ್‌ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಸಿಬ್ಬಂದಿ ರಾಮು, ಜಗದೀಶ್ ಮತ್ತಿತರರಿದ್ದರು.

PREV

Recommended Stories

20 ವರ್ಷದಲ್ಲಿ ಆಗದ ರಸ್ತೆ 20 ದಿನದಲ್ಲೇ ಆಯಿತು
ಕೆಆರೆಸ್‌ ನೀರು ನಿಲ್ಸಿ ಬ್ಲಫ್‌ನಲ್ಲಿ ಬಿದ್ದಿದ್ದ ಆನೆ ರಕ್ಷಣೆ