ಮೂಡಿಗೆರೆ: ಸಿಪಿಐ ಪಕ್ಷದ 100 ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಶತಮಾನೋತ್ಸವ ಜಾಥಾ ನ.30 ರಂದು ಕೆಜಿಎಫ್‌ನಲ್ಲಿ ಉದ್ಘಾಟನೆಗೊಂಡು ಮೂಡಿಗೆರೆಗೆ ಈ ಜಾಥಾ ಡಿ.18 ರಂದು ಆಗಮಿಸಲಿದೆ ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಬಿ.ಕೆ.ಲಕ್ಷ್ಮಣ್‌ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷ ತಾಲೂಕಿನಲ್ಲಿ ನಿರಂತರವಾಗಿ ಇಲ್ಲಿಯ ಜ್ವಲಂತ ಸಮಸ್ಯೆ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದೆ. ಇಲ್ಲಿವರೆಗೂ ಆಡಳಿತ ನಡೆಸಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ ಎಂದರು.ಫಾ.ನಂ 50 ಮತ್ತು 53ಯಲ್ಲಿ ಸರಕಾರವೇ ಮಂಜೂರು ಮಾಡಿದ್ದ ಸಣ್ಣ ರೈತರ ಜಮೀನನ್ನು ಮತ್ತೆ ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆಯೆ ಹೊರತು, ದೊಡ್ಡ ಬೆಳೆಗಾರರ ಜಮೀನು ವಶಪಡಿಸಿಕೊಳ್ಳಲು ಮುಂದಾಗಿಲ್ಲ. ಅಲ್ಲದೇ ನೂರಾರು ಎಕರೆ ಜಮೀನು ಒತ್ತುವರಿದಾರರಿದ್ದರೂ ಈ ಬಗ್ಗೆ ಸರಕಾರವಾಗಲಿ, ಸ್ಥಳೀಯ ಶಾಸಕರಾಗಲಿ ತಲೆ ಕೆಡಸಿಕೊಂಡಿಲ್ಲ ಎಂದು ದೂರಿದರು. ಈಗಾಗಲೇ ಫಾ.ನಂ. 50 ಮತ್ತು 53ಯಲ್ಲಿ ಮಂಜೂರಾಗಿದ್ದ ಸುಮಾರು 2600 ಅರ್ಜಿ ವಜಾ ಮಾಡಿದ್ದು, ಅದರಲ್ಲಿ 600ಕ್ಕೂ ಅಧಿಕ ಮಂದಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಆರ್ಥಿಕವಾಗಿ ಹಿಂದುಳಿದವರು ಕೋರ್ಟ್‌ಗೆ ಹೋಗಲು ಸಾಧ್ಯವಾಗದೇ ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ನೂರಾರು ಎಕರೆ ಜಮೀನು ಒತ್ತುವರಿ ಮಾಡಿದ್ದಾರೆ. ಅಂತವರಿಗೆ ಕಾನೂನು ಅನ್ವಯವಾಗಲ್ಲವೇ ಎಂದು ಪ್ರಶ್ನಿಸಿದರು.
ಮುಂದಿನ ದಿನದಲ್ಲಿ ನಮ್ಮ ಪಕ್ಷ ಸಂಘಟನೆ ಇನ್ನಷ್ಟು ಬಲಗೊಳಿಸಿ, ಜಿಲ್ಲೆಯಲ್ಲಿ ರೈತರ, ಕೂಲಿ ಕಾರ್ಮಿಕರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಜನ ವಿರೋಧಿ ನೀತಿ ಬಗ್ಗೆ ಹೋರಾಟ ನಡೆಸುವ ಜತೆಗೆ ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಹ ಕಾರ್ಯದರ್ಶಿ ರಾಜು ಬಾನಳ್ಳಿ, ತಾಲೂಕು ಸಂಚಾಲಕ ಜಗದೀಶ್ ಚಕ್ರವರ್ತಿ ಉಪಸ್ಥಿತರಿದ್ದರು.