ಬಳ್ಳಾರಿ: ಗ್ರಾಹಕರು ಡಿಜಿಟಲ್ ಖರೀದಿಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದು, ಆನ್‌ಲೈನ್ ಮೂಲಕ ಆಗುವ ವಂಚನೆಗಳಿಂದ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಸಲಹೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಆಹಾರ ಸುರಕ್ಷತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಬ್ರಹ್ಮಂ ಮಾತನಾಡಿ, ಹಣ ನೀಡಿ ವಸ್ತು ಖರೀದಿಸುವಾಗ ವಸ್ತುವಿನ ಗುಣಮಟ್ಟ, ಬೆಲೆ, ದಿನಾಂಕ, ಮುಕ್ತಾಯಗೊಳ್ಳುವ ದಿನ ಸೇರಿದಂತೆ ಎಲ್ಲ ಅಂಶಗಳನ್ನು ಪರಿಶೀಲಿಸಿ, ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಹಕರು ಮೋಸದ ಬಗ್ಗೆ ಸಂಶಯ ಕಂಡುಬಂದಲ್ಲಿ ಅದನ್ನು ಖಚಿತಪಡಿಸಿಕೊಳ್ಳುವ ಹಕ್ಕಿದೆ. ಹಾಗಾಗಿ ಪ್ರತಿ ತೂಕದ ಯಂತ್ರಗಳನ್ನು ಪರಿಶೀಲನೆ ಮಾಡಿ ವಸ್ತುಗಳ ಖರೀದಿ ಮಾಡಬೇಕು. ಪದಾರ್ಥಗಳ ನಿವ್ವಳ ತೂಕವನ್ನು 1ಕೆಜಿ ಗೆ ಎಷ್ಟು ಗ್ರಾಂ ಬರುತ್ತದೆ ಮತ್ತು ವಸ್ತುಗಳ ಮೇಲೆ ಬರೆದಿರುವ ವಿಷಯವನ್ನು ಗ್ರಾಹಕರು ತಿಳಿದಿರಬೇಕು ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಮನೋಜ್ ಕುಮಾರ್ ತಿಳಿಸಿದರು.ಹಿರಿಯ ವಕೀಲ ಎಚ್.ಎಂ. ಅಂಕಲಯ್ಯ ಮಾತನಾಡಿ, ಗ್ರಾಹಕರು ಯಾವುದೇ ವಸ್ತು, ಸರಕುಗಳನ್ನು ಖರೀದಿಸುವ ಸಂದರ್ಭದಲ್ಲಿ ವಸ್ತುವಿನ ಗುಣಮಟ್ಟ, ಅವಧಿ ಇವನ್ನೆಲ್ಲ ಕಡ್ಡಾಯವಾಗಿ ಪರಿಶೀಲಿಸಿ ರಶೀದಿ ಪಡೆದುಕೊಳ್ಳಬೇಕು. ಖರೀದಿಸಿದ ವಸ್ತುವಿನ ಗುಣಮಟ್ಟ ಕಳಪೆ ಮತ್ತು ದೋಷಪೂರಿತವಾಗಿದರೆ ಅಂತಹ ಸಂದರ್ಭದಲ್ಲಿ ಗ್ರಾಹಕರು ರಶೀದಿಯನ್ನು ಗ್ರಾಹಕರು ಆಯೋಗಕ್ಕೆ ಕಳುಹಿಸಿ ದೂರು ಸಲ್ಲಿಸಿದರೆ ಗ್ರಾಹಕರಿಗೆ ಸೂಕ್ತ ಪರಿಹಾರ ಒದಗಿಸಬಹುದು ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸಕೀನ ಮಾತನಾಡಿದರು.ಬಳ್ಳಾರಿಯ ಹಿರಿಯ ವಕೀಲರಾದ ಎನ್.ಪ್ರಕಾಶ್, ಡಿಜಿಟಲ್ ನ್ಯಾಯದ ಮೂಲಕ ಕಾರ್ಯಕ್ರಮ ಮತ್ತು ತ್ವರಿತ ನ್ಯಾಯ ವಿತರಣೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ, ಬಳ್ಳಾರಿ ಅನೌಪಚಾರಿಕ ಪಡಿತರ ಪ್ರಾದೇಶ ಸಹಾಯಕ ನಿರ್ದೇಶಕಿ ಎಚ್.ಹೊನ್ನಮ್ಮ, ನ್ಯಾಯಬೆಲೆ ಅಂಗಡಿಯ ಏಜೆಂಟರು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.