ಕುಷ್ಟಗಿ: ಪಟ್ಟಣದಲ್ಲಿ ಮೆಟ್ರಿಕ್ ನಂತರದ ಗಂಡು ಮಕ್ಕಳ ಹಾಸ್ಟೆಲ್ ನಿರ್ಮಾಣ ಸಾರ್ವಜನಿಕರ ಬಹು ವರ್ಷಗಳ ಕನಸು ಈಗ ನನಸಾಗಲಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಬಹು ವರ್ಷಗಳ ಗಂಡು ಮಕ್ಕಳ ಹಾಸ್ಟೆಲ್ ನಿರ್ಮಾಣದ ಕನಸು ಈಗ ನನಸಾಗುತ್ತಿದೆ. ಕಟ್ಟಡ ಕಾಮಗಾರಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದವರು ಅನುಷ್ಠಾನ ಮಾಡುತ್ತಿದ್ದು, ಹೊಸ ತಾಂತ್ರಿಕತೆ ಉಪಯೋಗಿಸಿಕೊಂಡು ಉತ್ತಮ ಹಾಗೂ ಗುಣಮಟ್ಟ ಕಾಪಾಡುವಂತೆ ಸೂಚಿಸಲಾಗಿದೆ. ಸುಮಾರು 13 ಕೊಠಡಿಗಳು ನಿರ್ಮಾಣವಾಗುತ್ತಿದ್ದು ಅದಕ್ಕಾಗಿ ಈ ಜಾಗದಲ್ಲಿ ಇರುವಂತಹ ಹಳೆ ಕಟ್ಟಡಗಳನ್ನು ಈಗಾಗಲೆ ನೆಲಸಮಗೊಳಿಸಲು ಮುಂದಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮವಾದ ಹಾಸ್ಟೇಲ್ ನಿರ್ಮಾಣವಾಗಲಿದೆ ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ನೆಲಗಣಿ, ಜಿ.ಎಂ. ಅಡವಿ, ಬಸವರಾಜ ಕಮತರ, ಮುತ್ತಣ್ಣ ಹಾವಿನಾಳ, ಮೈಬುಬಸಾಬ್ ಕಟಗಿ, ಸರೋಜಿನಿ ಮಹಡಿ, ಶಾಂತಮ್ಮ,ಮಲ್ಲಯ್ಯ, ಶರಣಬಸವ, ಇಂಜಿನಿಯರ್ ಭನರಾಜ. ವಾದಿರಾಜ ಶ್ಯಾಟಿ, ಶುಕಮುನಿ ಕೊರಡಕೇರಿ ಸೇರಿದಂತೆ ಅನೇಕರು ಇದ್ದರು.ಕನ್ನಡಪ್ರಭ ವರದಿ ಸ್ಮರಣೆ: ಜ.30ರ 2025ರಂದು ಅನೈತಿಕ ಚಟುವಟಿಕೆ ತಾಣವಾದ ಹಾಸ್ಟೇಲ್‌ನ ನಿರುಪಯುಕ್ತ ಕೊಠಡಿ ಎಂಬ ತಲೆಬರಹದಡಿಯಲ್ಲಿ ಸಮಗ್ರವಾದ ವರದಿ ಬಿತ್ತರಿಸಲಾಗಿತ್ತು.ಈಗ ಹಳೆಯ ಕೊಠಡಿಗಳನ್ನು ತೆರವುಗೊಳಿಸುವ ಮೂಲಕ ಹೊಸ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದು ಕನ್ನಡಪ್ರಭ ವರದಿಯನ್ನು ಸ್ಮರಿಸಬಹುದಾಗಿದೆ.
ಕುಷ್ಟಗಿ ಪಟ್ಟಣದಲ್ಲಿ ಬಹು ವರ್ಷಗಳ ಹಾಸ್ಟೇಲ್ ನಿರ್ಮಾಣದ ಕನಸು ಈಗ ನನಸಾಗುತ್ತಿದೆ.ಅಂದಾಜು ₹5ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿದೆ ಉತ್ತಮ ಕಟ್ಟಡ ನಿರ್ಮಿಸಿಕೊಡುವಂತೆ ಅನುಷ್ಟಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ತಿಳಿಸಿದ್ದಾರೆ.