ಪ್ರಸಾದ್ ನಗರೆ
ಈ ವೇಳೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಜೋರಾಗಿರುತ್ತದೆ. ಸ್ಥಳೀಯ ವಾಹನಗಳು, ದ್ವಿಚಕ್ರ ವಾಹನಗಳು ಓಡಾಡುವುದಕ್ಕೆ ತ್ರಾಸು ಪಡಬೇಕಾದ ಪರಿಸ್ಥಿತಿ ಇದೆ. ಅದರಲ್ಲೂ ದೆಹಲಿ, ಮುಂಬೈ, ಹೈದರಾಬಾದ್‌ಗಳಿಂದ ಹೊನ್ನಾವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಅವರು ಮುಖ್ಯವಾಗಿ ಇಲ್ಲಿನ ಇಕೋ ಬೀಚ್, ಕಾಂಡ್ಲಾವನ ಮತ್ತು ಬೋಟಿಂಗ್ ಗೆ ಮನಸ್ಸು ಮಾಡುತ್ತಾರೆ. ಹೀಗಾಗಿ, ವಾಹನ ಜಂಗುಳಿಯಿಂದ ತುಂಬಿರುತ್ತದೆ. ಬೋಟಿಂಗ್ ಹೋಗಲು ಇಚ್ಛೆ ಹೊಂದುವ ಪ್ರವಾಸಿಗರು ತಮ್ಮ ದೊಡ್ಡ ದೊಡ್ಡ ಬಸ್, ಟ್ರಾವೆಲ್ಲರ್‌ಗಳನ್ನು ಹೆಚ್ಚಾಗಿ ತೆಗೆದುಕೊಂಡು ಬರುತ್ತಾರೆ. ತಾಲೂಕಿನ ಬೋಟಿಂಗ್‌ಗೆ ಹೋಗುವ ಕೆಳಗಿನ ಪಾಳ್ಯಾ ರಸ್ತೆ ಅತ್ಯಂತ ಇಕ್ಕಟ್ಟಾಗಿದ್ದು, ಸಿಂಗಲ್ ರೋಡ್ ಆಗಿರುತ್ತದೆ. ಹೀಗಾಗಿ, ಪ್ರವಾಸಿಗರ ಬಸ್‌ಗಳು ಅಲ್ಲಿ ಹೋದರೆ ಎದುರುಗಡೆಯ ವಾಹನ ಸಂಚರಿಸಲು ತೀರಾ ಕಷ್ಟವಾಗುತ್ತದೆ.
ಡಿಸೆಂಬರ್ ೨೫ ಕ್ರಿಸ್ಮಸ್ ರಜಾದಿಂದ ಆರಂಭಿಸಿ ಹೊನ್ನಾವರ ತೀರಾ ರಶ್ ಆಗಿದೆ. ಶರಾವತಿ ನದಿಯ ಬ್ರಿಡ್ಜ್ ನಿಂದ ಆರಂಭಿಸಿ ಸುಮಾರು ಎರಡು ಕಿ.ಮೀ. ಅಂದರೆ ಕಾಲೇಜ್ ಸರ್ಕಲ್ ವರೆಗೆ ಟ್ರಾಫಿಕ್ ಜಾಮ್ ಆದ ನಿದರ್ಶನಗಳಿವೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೋಲೀಸರು ಸಾಕಷ್ಟು ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿರುತ್ತಾರೆ. ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದಾರೆ.ಇನ್ನು ಶರಾವತಿ ನದಿಯ ಸೇತುವೆಯ ಎಡಭಾಗದಲ್ಲಿ ರಸ್ತೆಯನ್ನು ಡೈವರ್ಟ್ ಮಾಡುತ್ತಿದ್ದು. ಈ ಕಾರಣದಿಂದ ಒಂದೇ ಸಮನೆ ಬರುವ ವಾಹನಗಳನ್ನು ಒಮ್ಮೆ ನಿಲ್ಲಿಸಿ ಮುಂದೆ ತರಬೇಕಾಗುತ್ತದೆ. ಇದರಿಂದ ಸಹ ಟ್ರಾಫಿಕ್ ಜಾಮ್ ಆಗುತ್ತಿದೆ. ಎನ್.ಎಚ್.ಎ.ಐ. ನವರು ಕೆಲಸವನ್ನು ಮಂದಗತಿಯಲ್ಲಿ ನಡೆಸುತ್ತಿರುವುದೂ ಇಲ್ಲಿನ ಟ್ರಾಫಿಕ್ ಜಾಮ್ ಹೆಚ್ಚಾಗಲು ಕಾರಣವಾಗುತ್ತಿದೆ.
ಹೋಟೆಲ್ ರೂಮ್‌ಗಳು ಫುಲ್ಇನ್ನು ಪ್ರವಾಸಿಗರ ಸಂಖ್ಯೆ ಹೆಚ್ಚಿನದಾಗಿ ಬರುತ್ತಿರುವ ಹಿನ್ನೆಲೆ ತಾಲೂಕಿನಲ್ಲಿರುವ ಹೋಟೆಲ್ ಗಳು, ರೆಸಾರ್ಟ್‌ಗಳು ಬಹುತೇಕ ಫುಲ್ ಆಗಿದೆ. ಎಷ್ಟು ಹಣವನ್ನು ಬೇಕಾದರೂ ನೀಡ್ತೆವೆ ರೂಮ್ ಕೊಡಿ ಎಂದರೂ ರೂಮ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿಗೆ ಆಗಿರುವುದರಿಂದ ಪ್ರವಾಸಿ ಸ್ಥಳದ ಸಮೀಪದ ಅಂಗಡಿ ಮುಂಗಟ್ಟುಗಳಲ್ಲಿ ಜೋರಾದ ವ್ಯಾಪಾರವೂ ನಡೆಯುತ್ತಿದೆ.ಇದೊಂದು ವಾರ ಹೊನ್ನಾವರ ಜನಜಂಗುಳಿಯಿಂದ ತುಂಬಿರುತ್ತದೆ. ಒಂದೇ ಸಮನೆ ಬಂದು ಇಲ್ಲಿನ ಸೌಂದರ್ಯವನ್ನು ಸವಿಯುವ ಬದಲು ಇಲ್ಲಿನ ರಶ್ ಕಡಿಮೆಯಾದ ಬಳಿಕ ಹೊನ್ನಾವರದ ಸೌಂದರ್ಯ ಸವಿಯುವುದು ಒಳ್ಳೆಯದು.
ತಾಲೂಕಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ರಜಾವನ್ನು ಕಳೆಯಲು ಇಲ್ಲಿಗೆ ಆಗಮಿಸಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆಯಾದರೂ ಅದನ್ನು ನಿಯಂತ್ರಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬ್ಯಾರಿಕೇಡ್ ಗಳನ್ನು ಅಗತ್ಯವಿರುವ ಸ್ಥಳಗಳಲ್ಲಿ ಹಾಕಿದ್ದೇವೆ. ದೊಡ್ಡ ಗಾತ್ರದ ವಾಹನಗಳನ್ನು ಬೋಟಿಂಗ್ ನಡೆಯುವ ಸ್ಥಳಗಳಿಗೆ ಬಿಡುತ್ತಿಲ್ಲ ಎಂದು ಸಿಪಿಐಸಿದ್ದರಾಮೇಶ್ವರ ಹೇಳಿದ್ದಾರೆ.