ಶಿಕ್ಷಣವಂತರಾಗಿ ದೌರ್ಜನ್ಯ ತಡೆಗೆ ಮುಂದಾಗಿ: ನ್ಯಾ. ಮಹಾಂತೇಶ ಚೌಳಗಿ

KannadaprabhaNewsNetwork |  
Published : Nov 26, 2024, 12:49 AM IST
ಪೋಟೊ25ಕೆಎಸಟಿ1: ಕುಷ್ಟಗಿ ಪಟ್ಟಣದ ದೇವರಾಜು ಅರಸು ಭವನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಯ ದಿನಾಚರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಮಹಿಳೆಯರ ಮೇಲೆ ದೌರ್ಜನ್ಯದಂತಹ ಪ್ರಕರಣಗಳು ನಡೆದರೆ ದೌರ್ಜನ್ಯ ನಡೆಸಿದವರ ವಿರುದ್ಧ ದೂರು ನೀಡುವ ಮೂಲಕ ದೌರ್ಜನ್ಯ ತಡೆಗಟ್ಟುವ ಕೆಲಸ ಮಾಡಬೇಕು.

ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಮಹಿಳೆಯರ ಮೇಲೆ ದೌರ್ಜನ್ಯದಂತಹ ಪ್ರಕರಣಗಳು ನಡೆದರೆ ದೌರ್ಜನ್ಯ ನಡೆಸಿದವರ ವಿರುದ್ಧ ದೂರು ನೀಡುವ ಮೂಲಕ ದೌರ್ಜನ್ಯ ತಡೆಗಟ್ಟುವ ಕೆಲಸ ಮಾಡಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ ಹೇಳಿದರು.ಪಟ್ಟಣದ ದೇವರಾಜು ಅರಸು ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್‌ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಯ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ನಿರಂತರವಾಗಿ ದೈಹಿಕ, ಮಾನಸಿಕವಾಗಿ, ಆಸ್ತಿ ವಿಚಾರವಾಗಿ ಸೇರಿದಂತೆ ಅನೇಕ ತರಹದಲ್ಲಿ ದೌರ್ಜನ್ಯ ನಡೆಯುತ್ತವೆ. ಇವುಗಳ ನಿಯಂತ್ರಣಕ್ಕಾಗಿ ಸಮರ್ಪಕವಾದ ಶಿಕ್ಷಣ ಪಡೆದುಕೊಳ್ಳಬೇಕು. ಕಾನೂನಿನ ನೆರವು ಪಡೆಯಬೇಕು ಎಂದರು. ಪಿಎಸ್‌ಐ ಹನುಮಂತಪ್ಪ ತಳವಾರ ಮಾತನಾಡಿ, ಮೌಲ್ಯಯುತವಾದ ಶಿಕ್ಷಣದ ಕೊರತೆಯಿಂದ ದೇಶದಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಪ್ರಕರಣಗಳನ್ನು ನಿಯಂತ್ರಣ ಮಾಡಬೇಕು ಎಂದರು.ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ದೌರ್ಜನ್ಯ ನಡೆಯುತ್ತಿದ್ದು, ಮಹಿಳೆಯರ ಭಾವಚಿತ್ರಗಳನ್ನು ಬೇರೊಂದು ಚಿತ್ರದೊಂದಿಗೆ ಅಂಟಿಸುವದು, ಅಸಭ್ಯ ಪದಗಳ ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ. ಮನುಷ್ಯರಲ್ಲಿ ಇರುವ ಸ್ವಾರ್ಥ ಮನೋಭಾವನೆಯು ಹೆಚ್ಚಾಗುತ್ತಿದ್ದು, ಇದರಿಂದಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಇದರ ನಿಯಂತ್ರಣಕ್ಕಾಗಿ ಮಹಿಳೆಯರು ಉತ್ತಮವಾದ ಶಿಕ್ಷಣ ಪಡೆಯಬೇಕು, ಮಹಿಳೆಯರು ಸಬಲರಾಗಬೇಕು. ಧೈರ್ಯದಿಂದ ಇರಬೇಕು ಸಮಸ್ಯೆಗಳನ್ನು ಎದುರಿಸಿ, ಆಗಿರುವ ದೌರ್ಜನ್ಯದ ವಿರುದ್ಧ ದೂರು ದಾಖಲು ಮಾಡುವ ಮೂಲಕ ನ್ಯಾಯ ಪಡೆಯಬೇಕು ಎಂದರು.ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿದರು.ಈ ಸಂದರ್ಭ ಸಹಾಯಕ ಸರ್ಕಾರಿ ಅಭಿಯೋಜಕ ಎಲ್. ರಾಯನಗೌಡ, ಇಂದಿರಾ ಸುಹಾಸಿನಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಮೇಲ್ವಿಚಾರಕಿ ಜ್ಯೋತಿ ಕುಂಬಾರ, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಸುನೀಲ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಶಾಲಾ ವಿದ್ಯಾರ್ಥಿನಿಯರು ಇದ್ದರು. ಪೊಲೀಸ್‌ ಸಿಬ್ಬಂದಿ ಶರಣಪ್ಪ ನವಲಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!