ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅಮೆಜಾನ್ ಸೀನಿಯರ್ ಟ್ಯಾಲೆಂಟ್ ಅಕ್ವೆಸಿಷನ್ ಲೀಡರ್ ಸೋನುಕುಮಾರ್
ನಗರ ಹೊರವಲಯದ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರದಾನ ಸಮಾರಂಭವು ಹಲವು ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು.
ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿದ ಅಮೆಜಾನ್ ಸೀನಿಯರ್ ಟ್ಯಾಲೆಂಟ್ ಅಕ್ವೆಸಿಷನ್ ಲೀಡರ್ ಸೋನುಕುಮಾರ್ ಮಾತನಾಡಿ, ಒಮ್ಮೆ ಪದವಿ ಮುಗಿಸಿ ಹೊರನಡೆದರೆ, ನಿಮಗಾಗಿ ಹೊಸ ಅವಕಾಶಗಳನ್ನು ಬಿಚ್ಚಿಡಲು ಹೊಸದಾದ ಪ್ರಪಂಚ ಕಾಯುತ್ತಿರುತ್ತದೆ. ಹೊಸ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ನವ ಚೈತನ್ಯ ಹಾಗೂ ಉತ್ಸಾಹ ಇರಬೇಕು ಎಂದರು.ನಿಮ್ಮೊಳಗಿನ ಶಕ್ತಿ, ಕೌಶಲ್ಯಗಳನ್ನರಿತು ಮುನ್ನುಗ್ಗಬೇಕು. ನಾವು ಎಲ್ಲಿರಬೇಕು, ನಮ್ಮ ಸಾಮರ್ಥ್ಯ ಏನೆಂಬುದನ್ನು ಅರಿತುಕೊಳ್ಳಬೇಕು. ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಅರಿಯಬೇಕು. ಕಾರ್ಪೊರೇಟ್ ಕಂಪನಿಗಳ ಅಗತ್ಯತೆ ಏನೆಂಬುದನ್ನ ಅರಿಯಬೇಕು. ಅಗತ್ಯತೆಗೆ ತಕ್ಕಂತೆ ನಾವು ಶ್ರಮ ಹಾಕಿದಾಗ ಯಶಸ್ಸು ನಮ್ಮದಾಗುತ್ತದೆ. ಯಾವುದು ಸುಲಭ ಅಲ್ಲ. ಶ್ರಮ ಹಾಕಿದರೆ ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತದೆ. ಎಲ್ಲರೂ ಅದರತ್ತ ಗಮನಹರಿಸಿ ಎಂದು ಸಲಹೆ ನೀಡಿದರು.ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾದ ನಿರ್ದೇಶಕ ಮಹದೇಶ ವಿ ಮಾತನಾಡಿ, ನಿಮಗೆಲ್ಲರಿಗೂ ದೇಶ ಮತ್ತು ಪ್ರಪಂಚದಾದ್ಯಂತ ಹೇರಳವಾದ ಉದ್ಯೋಗ ಅವಕಾಶಗಳಿವೆ. ಪ್ರಸ್ತುತ ಕೃತಕ ಬುದ್ಧಿಮತ್ತೆ ಎಲ್ಲ ಉದ್ಯಮಗಳಲ್ಲೂ ಹೊಸದಾದ ಸಂಚಲನ ಮೂಡಿಸುತ್ತಿದೆ. ಬದಲಾವಣೆ ತರುತ್ತಿದೆ. ನೀವೆಲ್ಲರೂ ಎಐ ತಂತ್ರಜ್ಞಾನದಲ್ಲಿ ಹೆಚ್ಚು ಪ್ರಾವಿಣ್ಯತೆ ಪಡೆಯಬೇಕಿದೆ ಎಂದರು. ತಂತ್ರಜ್ಞಾನದಲ್ಲಿ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರಿನಲ್ಲಿರುವ ನೀವೆಲ್ಲರೂ ನಿಜಕ್ಕೂ ಅದೃಷ್ಟವಂತರು. ಎಲ್ಲಾ ಕ್ಷೇತ್ರಗಳಲ್ಲೂ ಸುಧಾರಣೆ ಕಾಣುತ್ತಿದೆ. ಬೆಂಗಳೂರು ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ಹೊಸ ಇಂಜಿನಿಯರ್ಸ್ ಮತ್ತು ಹೊಸ ಉದ್ಯಮ ಮತ್ತು ಉದ್ದಿಮೆದಾರರನ್ನು ಸೃಷ್ಟಿ ಮಾಡುತ್ತಿದೆ ಎಂದು ಹೇಳಿದರು. ವರದಿಯ ಪ್ರಕಾರ 2 ಲಕ್ಷಕ್ಕೂ ಅಧಿಕ ಸ್ಟಾರ್ಟಪ್ ಉದ್ಯಮಗಳು ನೋಂದಣಿಯಾಗಿದೆ. ಕಳೆದ ವರ್ಷದಲ್ಲಿ 50 ಸಾವಿರ ಹೊಸ ಉದ್ಯಮಗಳು ನೋಂದಣಿಯಾಗಿವೆ. ಉದ್ಯೋಗ ಹುಡುಕುವವರ ಜತೆಗೆ, ಉದ್ಯೋಗ ಸೃಷ್ಟಿದಾರರು ಹೆಚ್ಚಾಗುತ್ತಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಮಿಷನ್ ನಂತಹ ಹೊಸ ಯೋಜನೆಗಳನ್ನು ಸಹ ರೂಪಿಸಿದೆ ಎಂದು ಮಾಹಿತಿ ನೀಡಿದರು.
ಮರುಕಳಿಸಿದ ನೆನಪಿನ ಕ್ಷಣಗಳು
ವೇದಿಕೆಯಲ್ಲಿ ಕಾಲೇಜು ಸಿ.ಓ.ಓ ಭಾನು ಚೈತನ್ಯ ವರ್ಮಾ, ನಿರ್ದೇಶಕ ಗೋಪಾಲಕೃಷ್ಣ, ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಗುರು ವೃಂದ, ನೂರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.