ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ಹಲವೆಡೆ ಬರಗಾಲವಿದೆ. ಮತ್ತೆ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಬರಗಾಲದಿಂದ ರೈತರಿಗೆ ಸ್ವಲ್ಪ ನಷ್ಟವಾಗುತ್ತದೆ. ಅದೇ ಮಳೆಯಿಂದ ಹಾನಿಯಾದರೆ ಉಳುಮೆ, ಬಿತ್ತನೆ, ರಸಗೊಬ್ಬರ ಈ ಎಲ್ಲದಕ್ಕೂ ಖರ್ಚು ಮಾಡಿರುವುದರಿಂದ ಹೆಚ್ಚು ನಷ್ಟ ಉಂಟಾಗಲಿದೆ ಎಂದರು.
ಮಳೆಯಿಂದಾಗುವ ಹಾನಿ ಬಗ್ಗೆ ಅಧಿಕಾರಿಗಳು ಜಾಗೃತರಾಗಬೇಕು. ಮಳೆಹಾನಿ ಪರಿಹಾರದಲ್ಲಿ ನಿರ್ಲಕ್ಷ್ಯವಾದರೆ ಯಾವುದೇ ಮುಲಾಜಿಗೆ ಒಳಗಾಗದೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಕಳೆದ 3 ವರ್ಷಗಳಿಂದ ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಪರಿಶ್ರಮದಿಂದ ಇಲಾಖಾವಾರು ಅನುದಾನ ಶೇ.100 ರಷ್ಟು ಸದ್ಬಳಕೆಯಾಗುತ್ತಿರುವುದಕ್ಕೆ ಅಭಿನಂದಿಸುತ್ತೇನೆ. ಜಿಪಂ ಹಾಗೂ ಲೋಕೋಪಯೋಗಿ ಇಲಾಖೆ ಅಭಿವೃದ್ಧಿ ಕಾಮಗಾರಿಗಳು ನಿಗಧಿತ ಸಮಯದೊಳಗೆ ಟೆಂಡರ್ ಆಗಿರುವ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿಗಳನ್ನು ಮಳೆಗಾಲಕ್ಕೂ ಮುಂಚೆ ತ್ವರಿತಗತಿಯಲ್ಲಿ ಮುಗಿಸಬೇಕು. ಶಿಥಿಲಾವಸ್ಥೆಯ ಅಂಗನವಾಡಿ ಕೇಂದ್ರಗಳು, ಶಾಲಾ ಕಟ್ಟಡಗಳಿದ್ದರೆ ಶೀಘ್ರ ಮಾಹಿತಿ ಕೊಟ್ಟಲ್ಲಿ ದುರಸ್ತಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಮುಂಗಾರಿಗೆ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ಮೊದಲು ಜಮೀನು ಇಲ್ಲದವರು ರಸಗೊಬ್ಬರ ಪಡೆಯುತ್ತಿದ್ದರು. ಆದರೆ, ಈ ಬಾರಿ ಎಫ್‌ಐಡಿ ಸಂಖ್ಯೆ ಆಧಾರದ ಮೇಲೆ ರಸಗೊಬ್ಬರ ನೀಡಲಾಗುವುದು. ಜಮೀನು ಇಲ್ಲದವರು ರಸಗೊಬ್ಬರ ಪಡೆಯಲು ಸಾಧ್ಯವಿಲ್ಲ ಎಂದರು.
ಬೆಳ್ಳೂರು ಮತ್ತು ನಾಗಮಂಗಲ ವಿಭಾಗದ ಸೆಸ್ಕಾಂ ಎಇಇ ಕಚೇರಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಮತ್ತಷ್ಟು ಹೊಸ ವಿದ್ಯುತ್ ವಿತರಣಾ ಕೇಂದ್ರ ತರಲಾಗುವುದು. ತಾಲೂಕಿನ ಅಂಚೆಚಿಟ್ಟನಹಳ್ಳಿ ಹಾಗೂ ಬುರುಡುಗುಂಟೆ ಗ್ರಾಮದಲ್ಲಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಜಾಗ ಗುರುತು ಮಾಡಲಾಗಿದೆ ಎಂದರು.
ಹೇಮಾವತಿಯಿಂದ ಕೆರೆ- ಕಟ್ಟೆಗಳನ್ನು ತುಂಬಿಸಲು ನೀರು ಬಿಡಲಾಗಿತ್ತು. ಆದರೆ, ಕೆ.ಆರ್.ಪೇಟೆ ಮತ್ತು ಪಾಂಡವಪುರದಲ್ಲಿ ಕೆಲವು ತೊಂದರೆಗಳಾಗಿ ತಾಲೂಕಿಗೆ ನಿರೀಕ್ಷೆಯಷ್ಟು ನೀರು ಬರಲಿಲ್ಲ. ಸೂಳೆಕೆರೆಗೆ ಹೇಮಾವತಿಯಿಂದ ನೀರು ತುಂಬಿಸುವ ಕೆಲಸವಾಗುತ್ತಿದೆ. ಬೇಸಿಗೆ ಸಮಯದಲ್ಲಿ ಹೇಮಾವತಿ ಜಲಾಶಯದಿಂದ 204 ಕಿ.ಮೀ.ದೂರವಿರುವ ನಾಗಮಂಗಲ ತಾಲೂಕಿಗೆ ನೀರು ತರುವುದು ಒಂದು ದೊಡ್ಡ ಸಾಹಸ. ಮುಂದಿನ ಎರಡು ದಿನಗಳ ಕಾಲ ನೀರು ಹರಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕ ಅಶೋಕ್, ಇಒ ಸತೀಶ್, ಡಿವೈಎಸ್ಪಿ ಬಿ.ಚಲುವರಾಜು, ಬಿಇಒ ಲೋಕೇಶ್, ಸಿಡಿಪಿಒ ಕೃಷ್ಣಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ, ಸೆಸ್ಕಾಂ ಇಇ ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್, ಕೆಡಿಪಿ ಸದಸ್ಯರಾದ ಎನ್.ಜೆ.ರಾಜೇಶ್, ಎಸ್.ಬಿ.ರಮೇಶ್, ವರದರಾಜು ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.