ಪ್ರಕೃತಿ ವಿಕೋಪ ಎದುರಿಸಲು ಸನ್ನದ್ಧರಾಗಿ: ಮಂಜು ನಾಯಕ

KannadaprabhaNewsNetwork |  
Published : Jun 07, 2025, 12:10 AM IST
ಕಂಪ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ  ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿತು.  | Kannada Prabha

ಸಾರಾಂಶ

ಅತಿವೃಷ್ಟಿ, ಪ್ರವಾಹ ಹಾವಳಿ ಸೇರಿದಂತೆ ಪ್ರಕೃತಿ ವಿಕೋಪಗಳಿಂದ ಯಾವುದೇ ಅನಾಹುತವಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸನ್ನದ್ಧರಾಗಿರಬೇಕು ಎಂದು ತಹಸೀಲ್ದಾರ್ ಮಂಜು ನಾಯಕ ಅವರು ಕಂಪ್ಲಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದರು.

ಕಂಪ್ಲಿ: ಅತಿವೃಷ್ಟಿ, ಪ್ರವಾಹ ಹಾವಳಿ ಸೇರಿದಂತೆ ಪ್ರಕೃತಿ ವಿಕೋಪಗಳಿಂದ ಯಾವುದೇ ಅನಾಹುತವಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸನ್ನದ್ಧರಾಗಿರಬೇಕು ಎಂದು ತಹಸೀಲ್ದಾರ್ ಮಂಜು ನಾಯಕ ಸೂಚನೆ ನೀಡಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬಿರುಗಾಳಿ, ಪ್ರವಾಹ, ಅತಿವೃಷ್ಟಿ ಸಮಯದಲ್ಲಿ ವಹಿಸಬೇಕಿರುವ ಸುರಕ್ಷತಾ ಕ್ರಮಗಳಿಗೆ ಜೆಸ್ಕಾಂ ಅಧಿಕಾರಿ ಸಿಬ್ಬಂದಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಬೇಕು. ಕೋವಿಡ್‌ ಜತೆಗೆ ಪ್ರವಾಹ, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಡೆಂಘೀ, ಮಲೇರಿಯಾ, ಚಿಕೂನ್‌ ಗುನ್ಯಾ, ನೀರು ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ತಡೆಗೆ ಆರೋಗ್ಯ ಇಲಾಖೆ ಗಮನ ಹರಿಸಬೇಕು. ಅಲ್ಲದೇ ನೀರಿನ ಮಾದರಿಗಳನ್ನು ಪರೀಕ್ಷಿಸಿ ಸುರಕ್ಷತೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಜಾನುವಾರುಗಳಿಗೆ ತಗಲಬಹುದಾದ ರೋಗಗಳ ನಿಯಂತ್ರಣಕ್ಕಾಗಿ ಲಸಿಕೆ ನೀಡುವ ಕಾರ್ಯವನ್ನು ಪೂರ್ಣ ಗೊಳಿಸಬೇಕು. ಜಾನುವಾರುಗಳಿಗೆ ಆಶ್ರಯ, ಮೇವು, ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮುಂಗಾರು ಹಂಗಾಮಿನ ಬೇಡಿಕೆಗೆ ಅನುಗುಣವಾಗಿ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಸಬೇಕು. ಬಿರುಗಾಳಿ, ಅತಿವೃಷ್ಟಿಯಿಂದ ಹಾನಿಗೊಳಗಾಗುವ ಬೆಳೆಗಳ ಕುರಿತು ಶೀಘ್ರವಾಗಿ ವರದಿ ಸಲ್ಲಿಸಬೇಕಾಗುತ್ತದೆ. ಇನ್ನು ಮಳೆಯ ಸಮಯದಲ್ಲಿ ಆಗಾಗ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಪುರಸಭೆ ಹಾಗೂ ಗ್ರಾಪಂ ಅಧಿಕಾರಿಗಳು ಮಾಡಿಸಬೇಕು ಎಂದರು.

ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆಗೊಂಡಲ್ಲಿ ನದಿ ಪಾತ್ರದ ಜನರ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದು ಹಾಗೂ ಕಾಳಜಿ ಕೇಂದ್ರಗಳ ತೆರವಿಗೆ ಅವಶ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಉಪ ತಹಸೀಲ್ದಾರ್ ರವೀಂದ್ರ ಕುಮಾರ್, ತಾಪಂ ಎಡಿ ಕೆ.ಎಸ್. ಮಲ್ಲನಗೌಡ, ತಾಲೂಕು ಆರೋಗ್ಯ ಅಧಿಕಾರಿ ಡಾ. ಅರುಣ್ ಕುಮಾರ್, ಆರ್‌.ಐ. ಜಗದೀಶ್, ಶಿರಸ್ತೇದಾರ್ ಪಂಪಾಪತಿ, ರಮೇಶ್, ರಾಧಿಕಾ, ಸಿಆರ್‌ಪಿ ಟಿ.ಎಂ. ಬಸವರಾಜ್ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌