ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಕ್ಕೆ ಸಿದ್ಧರಾಗಿ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಸರ್ಕಾರದ ಮೇಲೆ ಒತ್ತಡ ತಂದು ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸರ್ಕಾರಿ ನೌಕರರು ಹೋರಾಟಕ್ಕೆ ಸಿದ್ದರಾಗಬೇಕು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರದ ಮೇಲೆ ಒತ್ತಡ ತಂದು ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸರ್ಕಾರಿ ನೌಕರರು ಹೋರಾಟಕ್ಕೆ ಸಿದ್ದರಾಗಬೇಕು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಕರೆ ನೀಡಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನೌಕರರಿಗೆ 7ನೇ ವೇತನ ಆಯೋಗದ ವರದಿ ಅನುಷ್ಠಾನ, ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ ಹಾಗೂ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿದರು.

ರಾಜ್ಯದ 12 ಲಕ್ಷ ಸರ್ಕಾರಿ ನೌಕರರ ಬದುಕಿನ ವಿಚಾರವಾಗಿದೆ. ನೌಕರರ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹಾಕಲು ಕಡಿಮೆ ಕಾಲಾವಕಾಶವಿದೆ. ಹಾಗಾಗಿ ತಾಲೂಕು, ಜಿಲ್ಲೆಗಳಲ್ಲಿ ನೌಕರರು ಶರವೇಗದಲ್ಲಿ ಒತ್ತಡ ತಂತ್ರಕ್ಕೆ ಮುಂದಾಗಬೇಕು. ಎಲ್ಲಾ ರೀತಿಯ ಹೋರಾಟಕ್ಕೆ ರಾಜ್ಯ ಸಂಘಟನೆ ಸಿದ್ಧವಾಗಿದೆ. ಇದಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

7ನೇ ವೇತನ ಆಯೋಗ ರಚಿಸಿ ವರ್ಷಗಳು ಕಳೆದಿವೆ. ಎರಡು ಬಾರಿ ಅವಧಿ ವಿಸ್ತರಣೆ ಮಾಡಿದ್ದು, ಇದರಿಂದ ಬಹಳ ವಿಳಂಬವಾಗಿದೆ. ಆಯೋಗಕ್ಕೆ ಮಾರ್ಚ್ 15 ರವರೆಗೆ ಕಾಲಾವಕಾಶ ನೀಡಲಾಗಿದೆ. ನಮಗೆ ತಿಳಿದಿರುವ ಮಾಹಿತಿ ಪ್ರಕಾರ ಆಯೋಗ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿದೆ. ವರದಿಯನ್ನು ತರಿಸಿಕೊಂಡು ಅನುಷ್ಠಾನ ಮಾಡಬಹುದು. ಆದರೆ, ಸರ್ಕಾರ ಈ ಕೆಲಸ ಮಾಡುತ್ತಿಲ್ಲ ಎಂದರು.

ಲೋಕಸಭೆ ಚುನಾವಣೆಗೆ ಮಾರ್ಚ್ ಎರಡನೇ ವಾರ ಅಧಿಸೂಚನೆ ಹೊರಬೀಳಬಹುದು. ಈ ಚುನಾವಣೆ ಮುಗಿದ ನಂತರ ಜೂನ್, ಜುಲೈನಲ್ಲಿ ವಿಧಾನ ಪರಿಷತ್ ನ 7 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನವೆಂಬರ್ ನೊಳಗೆ ತಾಪಂ, ಜಿಪಂ ಚುನಾವಣೆ ಮುಗಿಸಬೇಕಿದೆ ಎಂದರು.

ಈ ಎಲ್ಲಾ ಚುನಾವಣೆಗಳ ವೇಳೆ ಸುದೀರ್ಘಕಾಲ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದರಿಂದ ವೇತನ ಆಯೋಗದ ವರದಿ ಅನುಷ್ಠಾನ ಜಾರಿಯಾಗದೆ ದೊಡ್ಡ ಸಂಕಷ್ಟದ ಪರಿಸ್ಥಿತಿ ಎದುರಾಗಲಿದೆ. ಈ ನಿಟ್ಟಿನಲ್ಲಿ ಫೆಬ್ರವರಿಯೊಳಗೆ ಆಯೋಗದ ವರದಿ ಅನುಷ್ಠಾನ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ ಎಂದು ತಿಳಿಸಿದರು.

ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಹೋರಾಟ ಮಾಡಿದ್ದೆವು. ಆದರೆ, ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಆರೋಗ್ಯವಿಮೆ ಸೌಲಭ್ಯಕ್ಕೆ ಮನವಿ ಮಾಡಿದ್ದು, ಅದು ಕೂಡ ಜಾರಿಯಾಗಿಲ್ಲ. ಹೀಗಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಅನಿವಾರ್ಯವಾಗಿದೆ ಎಂದರು.

ಸರ್ಕಾರದ ಮೇಲೆ ಒತ್ತಡ ಹಾಕಲು ತಾಲೂಕು ಮತ್ತು ಜಿಲ್ಲಾ ಸಂಘ ನೌಕರರನ್ನು ಒಗ್ಗೂಡಿಸಿ ಆಯಾ ಕ್ಷೇತ್ರದ ವಿಧಾನಸಭೆ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರ ಮನೆಗೆ ಬೈಕ್ ರಾಲಿ, ಕಾಲ್ನಡಿಗೆ ಜಾಥಾ ಮೂಲಕ ತೆರಳಿ ಮನವಿ ಸಲ್ಲಿಸಿ, ಅವರಿಂದ ನೌಕರರ ಬೇಡಿಕೆ ಈಡೇರಿಸಲು ಕ್ರಮ ವಹಿಸುವಂತೆ ಮನವಿ ಮಾಡಿದರು.

ಬೇಡಿಕೆಗಳ ಬಗ್ಗೆ ಚರ್ಚಿಸಿ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲು ಕಾಲಾವಕಾಶ ಕೋರಿದ್ದು, ಅವರು ಅವಕಾಶ ನೀಡಿದರೆ ಸಂಘದ ಎಲ್ಲರೂ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚೆ ನಡೆಸಲಾಗುವುದು. ನಂತರ ನೌಕರರ ರಾಜ್ಯ ಸಮ್ಮೇಳನ ನಡೆಸಿ ಎರಡು ಮೂರು ಲಕ್ಷ ನೌಕರರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಬೇಕೇ ಅಥವಾ ಹೋರಾಟದ ಹಾದಿ ಹಿಡಿಯಬೇಕಾ ಎಂಬುದರ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ತಿಮ್ಮೇಗೌಡ, ಖಜಾಂಚಿ ಸಿದ್ದರಾಮು. ಹಿರಿಯ ಉಪಾಧ್ಯಕ್ಷ ರುದ್ರಪ್ಪ, ಬಸವರಾಜ, ಗಿರಿ ಗೌಡ, ಮೋಹನ್ ಕುಮಾರ್ , ಮಾಲತೇಶ, ಹೇಮಲತ, ದಿನೇಶ, ಸಿದ್ದೇಶ, ಕಾರ್ಯದರ್ಶಿ ಸದಾನಂದ, ಮಂಡ್ಯ ಜಿಲ್ಲಾಧ್ಯಕ್ಷ ಶಂಭುಗೌಡ ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಅಧ್ಯಕ್ಷರು ಉಪಸ್ಥಿತರಿದ್ದರು.

Share this article