
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಭನ್ವರ್ ಸಿಂಗ್ ಮೀನಾ
ಬರ ಪರಿಸ್ಥಿತಿ ಎದುರಿಸಲು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಕೇಸ್ವಾನ್ ಸಭಾಂಗಣದಲ್ಲಿ ಭಾನುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು. ಡಿಸೆಂಬರ್ ನಂತರ ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಈಗಿನಿಂದಲೇ ಸೂಕ್ತ ಕಾರ್ಯ ಯೋಜನೆ ರೂಪಿಸಬೇಕು. ಮುಂದಿನ ಸಭೆ ವೇಳೆಗೆ ಇದಕ್ಕೆ ಆದ್ಯತೆ ನೀಡಿ ಯೋಜನೆ ಸಿದ್ಧಪಡಿಸಿಕೊಳ್ಳಬೇಕು ಎಂದರು.ರಾಜ್ಯದಲ್ಲಿ ನೂತನವಾಗಿ ’ಪ್ರಜಾಸೇವಾ ಇಲಾಖೆ’ ಸ್ಥಾಪನೆಯಾಗಿದ್ದು, ಈ ಇಲಾಖೆ ಕಾರ್ಯಚಟುವಟಿಕೆಗಳ ಕುರಿತು ಶೀಘ್ರ ದಲ್ಲೇ ಪರಿಶೀಲನೆ ಆರಂಭಿಸಲಾಗುವುದು. ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯ ಆಪ್ ಹಾಜರಾತಿ ಬಳಸಬೇಕು. ನಮ್ಮ ಜಿಲ್ಲೆಯ ಕರ್ತವ್ಯ ಆಪ್ ಬಳಕೆ ಸದ್ಯ ಶೇ.50 ರಷ್ಟಿದ್ದು, ಎಲ್ಲಾ ಉಪ ಕಚೇರಿಗಳಲ್ಲಿ ಇದನ್ನು ಕಡ್ಡಾಯಗೊಳಿಸಬೇಕು ಎಂದು ತಿಳಿಸಿದರು.
ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಜನರು ಉದ್ಯೋಗ ಅರಸಿ ಬೇರೆಡೆಗೆ ವಲಸೆ ಹೋಗಬಾರದು. ಇದನ್ನು ತಡೆಯಲು ವಿಬಿ ಜಿ ರಾಮ್ ಜಿ (ನರೇಗಾ) ಯೋಜನೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಬೇಕು. ಕೃಷಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಮನ್ವಯದೊಂದಿಗೆ ರೈತರಿಗೆ ಪರ್ಯಾಯ ಆದಾಯ ತರುವಂತಹ ಕೆಲಸ ಒದಗಿಸಿ, ಅವರನ್ನು ಜಿಲ್ಲೆಯಲ್ಲೇ ಉಳಿಸಿಕೊಳ್ಳುವತ್ತ ಗಮನಹರಿಸಬೇಕು. ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳು ಸಕ್ರಿಯವಾಗಿ ಕೆಲಸ ಮಾಡಬೇಕು. ಬೆಳೆವಿಮೆಗೆ ಸಂಬಂಧಿಸಿದಂತೆ ಇನ್ಶೂರೆನ್ಸ್ ಕಂಪನಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶೇ.44ರಷ್ಟು ಮಳೆ ಕೊರತೆ:
ಸದ್ಯ ತೀವ್ರ ನೀರಿನ ಅಭಾವವಿರುವ 8 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 18 ಗ್ರಾಮಗಳಿಗೆ ಖಾಸಗಿ ಬೋರ್ ವೆಲ್‌ಗಳ ಮೂಲಕ ಕುಡಿವ ನೀರನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಮುಂಗಾರು ಮಳೆಯಿಂದ ಉಂಟಾಗಬಹುದಾದ ಮಳೆ ಹಾನಿ, ಬೆಳೆ ಹಾನಿ, ಭೂಕುಸಿತ ಹಾಗೂ ಇತರೆ ವಿವರಗಳನ್ನು ಸಭೆಗೆ ಮಾಹಿತಿ ನೀಡಲಾಯಿತು. ವಿಬಿ-ಜಿ ರಾಮ್-ಜಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡು ಹೆಚ್ಚಿನ ಮಾನವ ದಿನಗಳನ್ನು ಸೃಜಿಸುವುದು ಮತ್ತು ಕೂಲಿಗಾಗಿ ಸಾರ್ವಜನಿಕರು ವಲಸೆ ಹೋಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.