ದೆಹಲಿಗೆ ಹೋಗಿ ರೇಲ್ವೆ ಸಚಿವರೊಂದಿಗೆ ಚರ್ಚೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಶಿವಮೊಗ್ಗ- ನರಸಿಂಹರಾಜಪುರ- ಕೊಪ್ಪ ಮಾರ್ಗವಾಗಿ ಶೃಂಗೇರಿಗೆ ರೇಲ್ವೆ ಮಾರ್ಗ ನೀಡಬೇಕು ಎಂದು ಈ ಭಾಗದಿಂದ ಸಾರ್ವಜನಿಕರು ಮನವಿ ಸಲ್ಲಿಸಿದ್ದು ಈ ಬಗ್ಗೆ ರೇಲ್ವೆ ಇಲಾಖೆಗೆ ಪತ್ರ ಬರೆದಿದ್ದೇನೆ ಎಂದು ಚಿಕ್ಕಮಗಳೂರು- ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.ಭಾನುವಾರ ಖಾಸಗಿ ಕಾರ್ಯಕ್ರಮಕ್ಕೆ ಮುತ್ತಿನಕೊಪ್ಪ ಆಗಮಿಸಿದ ಸಂದರ್ಭದಲ್ಲಿ ಎನ್.ಆರ್.ಪುರದಲ್ಲಿ ಸುದ್ದಿ ಗಾರ ರೊಂದಿಗೆ ಮಾತನಾಡಿ ಶೀಘ್ರದಲ್ಲೇ ದೆಹಲಿಗೆ ಹೋಗಿ ರೇಲ್ವೆ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ. ಈಗಾಗಲೇ ಪರಿಸರ ವಾದಿಗಳು ರೇಲ್ವೆ ಮಾರ್ಗ ಆದರೆ ಪರಿಸರ ಹಾಳಾಗುತ್ತದೆ ಎಂದು ಎಚ್ಚರಿಕೆ ಕೊಡುತ್ತಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ ರೈಲು ಮಾರ್ಗ ಮಾಡಲು ಸಾಧ್ಯವೇ ಎಂಬುದನ್ನು ರೇಲ್ವೆ ಅಧಿಕಾರಿಗಳು ಪರಿಶೀಲನೆ ಮಾಡಬೇಕಾಗಿದೆ ಎಂದರು.ಶೃಂಗೇರಿಯಲ್ಲಿ ತಡೆ ಗೋಡೆ ಕುಸಿತದ ಬಗ್ಗೆ ಸುದ್ದಿ ಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಈ ತಡೆ ಗೋಡೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಅಲ್ಲಿಗೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದರು.
ಶಿವಮೊಗ್ಗ- ಮಂಗಳೂರು ನ್ಯಾಷನಲ್ ಹೈವೇ ರಸ್ತೆ ಆಗುಂಬೆಯಲ್ಲಿ ಸುರಂಗ ಮಾರ್ಗದ ಮೂಲಕ ಹೋಗುವ ಬಗ್ಗೆ ಸರ್ವೆ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಈಗ ಆಗುಂಬೆ ಘಾಟಿ ರಸ್ತೆ 6.50 ಮೀಟರ್ ಅಗಲ ಇದೆ. ಇದನ್ನು 9.50 ಮೀ. ಅಗಲ ಮಾಡಬೇಕಾಗಿದೆ. ಇದರಿಂದ ವಾಹನ ಅಪಘಾತಗಳನ್ನು ತಪ್ಪಿಸಬಹುದು.ಆಗುಂಬೆಯಲ್ಲಿ ಸುರಂಗ ಮಾರ್ಗ ಮಾಡಿದರೆ ರೈಲು ಸಹ ಅದರಲ್ಲಿ ಹೋಗಬಹುದು. ಶಿವಮೊಗ್ಗ ಸಂಸದ ರಾಘವೇಂದ್ರ ಸಹ ಪ್ರಯತ್ನ ನಡೆಸುತ್ತಿದ್ದಾರೆ.ಕೆಲವು ಪರಿಸವಾದಿಗಳು ಸುರಂಗ ಮಾಡಿದರೆ ಕೇರಳದ ವೈನಾಡು ರೀತಿಯಲ್ಲಿ ಗುಡ್ಡ ಕುಸಿಯಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವು ಕಡೆ ಸುರಂಗ ಮಾರ್ಗವಿದೆ. ಅಲ್ಲಿ ಏನೂ ಆಗಿಲ್ಲ. ತಜ್ಞರ ಅಭಿಪ್ರಾಯ ಪಡೆದು ಪರಿಸರವಾದಿಗಳ ಸಲಹೆ ಪಡೆದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.