ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿರಾಜಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ವಿರಾಜಪೇಟೆ ತಾಲೂಕು ಆಡಳಿತಾಧಿಕಾರಿ ಹಾಗೂ ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬೀ ಅವರ ನೇತೃತ್ವದಲ್ಲಿ ವಿರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಜರುಗಿತು.ಮುಂದಿನ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದು, ಮುಂಜಾಗ್ರತೆಯಾಗಿ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು ಸಿದ್ಧರಾಗಿ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಲಜೀವನ್ ಮಿಷನ್ ಬ್ಯಾಚ್ 1, ಬ್ಯಾಚ್ 2 ಹಾಗೂ ಬ್ಯಾಚ್ 3 ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.ಪಶು ಪಾಲನೆ ಇಲಾಖೆಯಿಂದ ರಾಸುಗಳಿಗೆ ಕಾಲು-ಬಾಯಿ ಜ್ವರ ಹಾಗೂ ಚರ್ಮಗಂಟು ರೋಗದ ಲಸಿಕೆ ನೀಡಲಾಗುತ್ತಿದೆ ಎಂದು ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶರಾದ ಗಿರೀಶ್ ಅವರು ಮಾಹಿತಿ ನೀಡಿದರು.ಸಣ್ಣ ಅಥವಾ ಅತೀ ಸಣ್ಣ ರೈತರಿಗೆ ಉಪ ಕಸುಬಾಗಿ ಹಸು ಸಾಕಾಣಿಕೆಗೆ ಹೆಚ್ಚು ಒತ್ತು ನೀಡಲು ಮಾಹಿತಿ ನೀಡಿ ಹಾಲು ಉತ್ಪಾದನೆಯನ್ನು ಹೆಚ್ಚು ಮಾಡಲು ಕ್ರಮವಹಿಸಿ ಹಾಗೂ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹಾಲು ಶೇಖರಣಾ ಘಟಕ ಸ್ಥಾಪನೆ ಮಾಡಲು ಚಿಂತನೆ ನಡೆಸಿ ಎಂದು ಉಪ ಕಾರ್ಯದರ್ಶಿ ಅಬ್ದುಲ್ ನಬೀ ಅವರು ಸಲಹೆ ನೀಡಿದರು.ಅಕ್ಷರ ದಾಸೋಹದಿಂದ ಪ್ರಧಾನಮಂತ್ರಿ ಪೋಷಣ್ ಅಭಿಯಾನದಡಿ ಆಹಾರ ನೀಡಲಾಗುತ್ತಿದ್ದು, ಎಲ್ಲಾ ಆಹಾರ ಧಾನ್ಯಗಳ ಗುಣಮಟ್ಟ ಪರೀಕ್ಷಿಸಿ ಉತ್ತಮ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರಾಜೇಶ್ ಅವರು ಸಭೆಗೆ ಮಾಹಿತಿ ನೀಡಿದರು.ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆಯನ್ನು ಉತ್ತೇಜಿಸುವ ಸಲುವಾಗಿ ಜೇನು ಪೆಟ್ಟಿಗೆಯನ್ನು ನೀಡಲಾಗುತ್ತಿದೆ ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರು ಅಕಾಲಿಕ ಮರಣ ಹೊಂದಿದ್ದರೆ 75 ಸಾವಿರ ರು. ಹಾಗೂ ಕೆಲಸದ ಸಮಯದಲ್ಲಿ ಸಣ್ಣಪುಟ್ಟ ಗಾಯಗಳಾದರೆ ವೈದ್ಯಕೀಯ ಸಹಾಯಧನ ನೀಡಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.ಶಿಕ್ಷಣ ಇಲಾಖೆ, ಕೃಷಿ, ಸಹಕಾರ, ಕಂದಾಯ, ಮೀನುಗಾರಿಕೆ, ಅಬಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ವಸತಿ ಇಲಾಖೆಯ ಅಧಿಕಾರಿಗಳು ಇಲಾಖಾವಾರು ಸಭೆಗೆ ಮಹಿತಿ ನೀಡಿದರು.ತಾ.ಪ.ಇ.ಒ. ಕೆ.ಸಿ.ಅಪ್ಪಣ್ಣ ಅವರು ಮಾತನಾಡಿ ಇಲಾಖೆಗಳಲ್ಲಿರುವ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ತಲುಪಿಸುವಲ್ಲಿ ಕಾರ್ಯನಿರ್ವಹಿಸಿ ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ವಿರಾಜಪೇಟೆ ತಾಲೂಕು ಪಂಚಾಯಿತಿ ಇ.ಒ.ಗಳಾದ ಕೆ.ಸಿ.ಅಪ್ಪಣ್ಣ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಇತರರು ಉಪಸ್ಥಿತರಿದ್ದರು.