ಸಕಾಲಕ್ಕೆ ಬೆಳೆ ಪರಿಹಾರ ನೀಡಲು ಮುಂದಾಗಿ: ಸಚಿವ ಮಧು ಬಂಗಾರಪ್ಪ

KannadaprabhaNewsNetwork |  
Published : Jul 23, 2024, 12:35 AM IST
ಫೋಟೊ:೨೨ಕೆಪಿಸೊರಬ-೦೪ : ಸೊರಬ ತಾಲ್ಲೂಕಿನ ವರದಾ  ನದಿ ಪ್ರವಾಹದಿಂದ ಮುಳುಗಡೆ ಹೊಂದಿರುವ ಕಡಸೂರು ಗ್ರಾಮದ ನೆರೆ ಪೀಡಿತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದ್ದರು. | Kannada Prabha

ಸಾರಾಂಶ

ಸೊರಬ ತಾಲೂಕಿನ ವರದಾ ನದಿ ಪ್ರವಾಹದಿಂದ ಮುಳುಗಡೆ ಹೊಂದಿರುವ ಕಡಸೂರು ಗ್ರಾಮದ ನೆರೆ ಪೀಡಿತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದ್ದರು.

ಕನ್ನಡಪ್ರಭ ವಾರ್ತೆ ಸೊರಬ

ಮಳೆಗಾಲದ ಸಂದರ್ಭದಲ್ಲಿ ವರದಾ ಹಾಗೂ ದಂಡಾವತಿ ನದಿ ಪ್ರವಾಹದಿಂದ ಬೆಳೆ ಕಳೆದುಕೊಳ್ಳುವ ರೈತರಿಗೆ ಸಕಾಲಕ್ಕೆ ಬೆಳೆ ಪರಿಹಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಭಾನುವಾರ ತಾಲೂಕಿನ ವರದಾ ನದಿ ಪ್ರವಾಹದಿಂದ ಮುಳುಗಡೆ ಹೊಂದಿರುವ ಕಡಸೂರು, ಹೊಳೆ ಜೋಳದಗುಡ್ಡೆ, ಬಂಕಸಾಣ ಗ್ರಾಮದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವರ್ಷ ಬರ ಪರಿಸ್ಥಿತಿಯಿಂದ ಕಂಗೆಟ್ಟಿದ್ದ ಜಿಲ್ಲೆ ಮತ್ತು ತಾಲೂಕಿನ ರೈತರಿಗೆ ಪ್ರಸಕ್ತ ಸಾಲಿನಲ್ಲಿ ಅಧಿಕ ಮಳೆ ಸುರಿಯುತ್ತಿದೆ. ಮಳೆಗಾಲ ಇನ್ನೂ ಮುಂದುವರೆಯಲಿದ್ದು, ವರದಾ ಮತ್ತು ದಂಡಾವತಿ ನದಿಗಳು ಜೀವ ಕಳೆ ಪಡೆದು ಉಕ್ಕಿ ಹರಿಯುತ್ತಿವೆ. ನದಿ ಪಾತ್ರದ ಜಮೀನು ಮತ್ತು ತೋಟಗಳಿಗೆ ಹಾನಿಯಾಗಿದ್ದು, ಒಂದು ತಿಂಗಳ ನಂತರ ಮಳೆಯಿಂದ ಆಗಿರುವ ಹಾನಿ ಕ್ರೋಢೀಕರಿಸಿ ಎಲ್ಲಾ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ವರದಿ ಪಡೆದು ನಿಗದಿತ ಸಮಯದಲ್ಲಿ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಳೆಯಿಂದ ಹಾನಿಗೊಳಗಾದ ಶಾಲಾ ಕಟ್ಟಡ, ರಸ್ತೆ, ಜಮೀನು ಹಾಗೂ ಮನೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ಪಡೆದುಕೊಳ್ಳಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಸ್ಥಳೀಯ ಮುಖಂಡರು ಈ ನಿಟ್ಟಿನಲ್ಲಿ ಫಲಾನುಭವಿಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ತಾಲೂಕಿನ ವರದಾ ನದಿಗೆ ಅಡ್ಡಲಾಗಿ ೫ ಭಾಗಗಳಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ₹೫೩ ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು ಟೆಂಡರ್ ಪ್ರತಿಕ್ರಿಯೆ ಮುಗಿಯುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು. ಈ ಯೋಜನೆಯನ್ನು ದಂಡಾವತಿ ನದಿಗೆ ಅಡ್ಡಲಾಗಿ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಸರ್ಕಾರ ಹಾಗೂ ಅಜೀಂ ಪ್ರೇಮ್‌ಜಿ ಸಹಯೋಗದಲ್ಲಿ ಸರ್ಕಾರಿ ಹಾಗೂ ಎಲ್ಲ ಅನುದಾನಿತ ಶಾಲಾ ಮಕ್ಕಳಿಗೆ ವಾರದ ೬ ದಿನವೂ ಮೊಟ್ಟೆ ವಿತರಿಸಲಾಗುವುದು. ಮುಂದಿನ ೩ ವರ್ಷದವರೆಗೆ ₹೧.೫೦೦ ಕೋಟಿ ಖರ್ಚು ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಸಾಗರ ಉಪ ವಿಭಾಗಾಧಿಕಾರಿ ಡಾ. ಯತೀಶ್, ಸಿಇಒ ಸುರೇಶ್, ತಹಶೀಲ್ದಾರ್ ಮಂಜುಳಾ ಹೆಗಡಾಳ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ. ಕುಮಾರ್, ಎಂಜನಿಯರ್‌ಗಳಾದ ಚಂದ್ರಪ್ಪ, ಗಣಪತಿ ನಾಯ್ಕ, ಸೌಮ್ಯಾ, ಮಾಜಿ ತಾ.ಪಂ. ಸದಸ್ಯ ಗಣಪತಿ ಹುಲ್ತಿಕೊಪ್ಪ, ಜಿ.ಪಂ. ಮಾಜಿ ಸದಸ್ಯ ತಬಲಿ ಬಂಗಾರಪ್ಪ, ವಕ್ತಾರ ಎಂ.ಡಿ. ಶೇಖರ್, ಮುಖಂಡರಾದ ಕೆ.ವಿ.ಗೌಡ, ಪ್ರಕಾಶ್ ಹಳೇಸೊರಬ, ಉಮಾಪತಿ ತೌಡತ್ತಿ, ಜಗದೀಶ್ ಕುಪ್ಪೆ, ಸತ್ಯನಾರಾಯಣ ಮೊದಲಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!