ಕೋದಂಡರಾಮ ದೇಗುಲಕ್ಕೆ ಭೇಟಿ
ಅರಕಲಗೂಡು: ಹಿಂದುತ್ವವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲಾ ಹಿಂದುಗಳು ಸಂಘಟಿತರಾಗಿ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಪದ್ಧತಿಗಳನ್ನು ನಿರಂತರವಾಗಿ ನಡೆಸುವ ಮೂಲಕ ಸದಾ ಜಾಗೃತರಾಗಿರಬೇಕು ಎಂದು ಮಂತ್ರಾಲಯದ ಡಾ.ಸುಬುದೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.ಶ್ರೀಕ್ಷೇತ್ರ ರಾಮನಾಥಪುರಕ್ಕೆ ತೆರಳುವ ಮಾರ್ಗಮಧ್ಯೆ ಅರಕಲಗೂಡಿನ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಸನ್ನಿಧಿಗೆ ಭೇಟಿ ನೀಡಿ ಶ್ರೀರಾಮರಿಗೆ ಮಂಗಳಾರತಿ ನೆರವೇರಿಸಿದ ನಂತರ ಆಶೀರ್ವಚನ ನೀಡಿ, ‘ಹಿಂದೂ ಸಮಾಜವನ್ನು ವಿಶ್ವದ ಉಳಿವಿಗಾಗಿ ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂವಿನ ಮೇಲಿದೆ. ಹಾಗೆಂದ ಮಾತ್ರಕ್ಕೆ ಇತರರನ್ನು ದ್ವೇಷಿಸುವ ಹಾಗೂ ಅವಹೇಳನಗೊಳಿಸುವ ಅಗತ್ಯವಿಲ್ಲ. ಇತರ ಧರ್ಮಗಳನ್ನು ಗೌರವಿಸುತ್ತಲೇ ನಮ್ಮ ಧರ್ಮವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ಜಾತಿ ಹೆಸರಿನಲ್ಲಿ ಹಿಂದುತ್ವವನ್ನು ಒಡೆದು ಆಳುವ ಪ್ರವೃತ್ತಿ ಸರಿಯಲ್ಲ’ ಎಂದು ಸಲಹೆ ನೀಡಿದರು.
‘ನಮಗೆ ಶ್ರೀರಾಮ ಆರ‍್ಶ ಪುರುಷ.ಶ್ರೀರಾಮನ ನಿರಂತರ ನಾಮ ಸ್ಮರಣೆಯಿಂದ ಭವ ಬಂಧನಗಳು ಮಾಯವಾಗಿ ನೆಮ್ಮದಿಯ ಬದುಕು ಬದುಕಲು ಸಾಧ್ಯವಿದೆ. ನಿರಂತರ ನಾಮಸ್ಮರಣೆ ಮಾಡಿ’ ಎಂದರು.ಶ್ರೀಗಳನ್ನು ಮಂಗಳವಾದ್ಯದ ಮೂಲಕ ಸ್ವಾಗತಿಸಿ, ಮಾತೆಯರಿಂದ ಆರತಿ ನೆರವೇರಿಸಲಾಯಿತು. ಪಟ್ಟಣದ ಎ.ಎಸ್.ರಾಮಸ್ವಾಮಿ, ಎ.ಎನ್.ಗಣೇಶಮೂರ್ತಿ, ಎ.ಎಸ್.ರಾಮಕೃಷ್ಣಯ್ಯ, ತಾಲೂಕು ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಕೆ.ಎಸ್.ವೆಂಕಟೇಶಮೂರ್ತಿ, ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ರುಕ್ಮಿಣಿ ಗುಂಡಪ್ಪ, ರಶ್ಮಿ ಮಂಜುಗೌಡ, ರಮೇಶ್, ಪ್ರಸನ್ನಕುಮಾರ್, ಹಿರಿಯಣ್ಣಯ್ಯ, ಎಂ.ರಘು, ಕಾರ್ತಿಕ್ ಇದ್ದರು.ಕಾದು ಕುಳಿತ ಭಕ್ತ ಸಾಗರ:
ಬೇಲೂರಿನಿಂದ ರಾಮನಾಥಪುರಕ್ಕೆ ದೇವಾಲಯಕ್ಕೆ ಮಂತ್ರಾಲಯದ ಡಾ.ಸುಬುದೇಂದ್ರ ತೀರ್ಥರು ಆಗಮಿಸುವ ಮಾಹಿತಿ ತಿಳಿದ ಭಕ್ತರು ದೇವಾಲಯದ ಬಳಿ ಸೇರಿದರು. ಸುಮಾರು 5 ಗಂಟೆಯಿಂದ ರಾತ್ರಿ 7 ಗಂಟೆಯಾದರೂ ಶ್ರೀಗಳು ಆಗಮಿಸಲಿಲ್ಲ. ಅನಿವಾರ‍್ಯ ಕಾರಣಗಳಿಂದ ಶ್ರೀಗಳ ಆಗಮನ ತಡವಾಗಿತ್ತು. ಸುಮಾರು ಎರಡು ಗಂಟೆಗಳಿಗೂ ಅಧಿಕ ಸಮಯ ದರ್ಶನಕ್ಕಾಗಿ ಕುಳಿತ ಭಕ್ತರು ಕದಲಿರಲಿಲ್ಲ. ಶ್ರೀಗಳು ಆಗಮಿಸುವವರೆಗೂ ಕಾದು ಕುಳಿತು ದರ್ಶನ ಪಡೆದರು.