ಕನ್ನಡಪ್ರಭವಾರ್ತೆ ಮಧುಗಿರಿ
ನಮ್ಮ ಮಾತೃಭಾಷೆ ಜ್ಞಾನ ಸಂಪಾದನೆಗೆ ದಾರಿದೀಪ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯೆ ಕಲಿತು ಜೀವನ ರೂಪಿಸಿಕೊಳ್ಳಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕರೆ ನೀಡಿದರು.ಇಲ್ಲಿನ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ಇತ್ತಿಚೆಗೆ ನಡೆದ ತಾಲೂಕು ಕಸಾಪ ಮತ್ತು ಪದವೀಧರರ ವೇದಿಕೆಯಿಂದ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಶೇ.100ರಷ್ಠು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ತಾಲೂಕಿನ ಯುವಕ ಶಶಿಕುಮಾರ್ ಎಎಫ್‌ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಆತನಲ್ಲಿರುವ ಜ್ಞಾನ ,ಛಲ ಪ್ರತಿಯೊಬ್ಬರಲ್ಲೂ ಬರಬೇಕು. ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಮಕ್ಕಳು ತಪ್ಪು ಹೆಜ್ಜೆ ಇಡದಂತೆ ಪೋಷಕರು ಮುತುವರ್ಜಿ ವಹಿಸಿ ಓದಿಸಬೇಕಿದೆ ಎಂದರು.ನಿವೃತ್ತ ಪ್ರಾಂಶುಪಾಲ ಪ್ರೊ.ಮುನೀಂದ್ರಕುಮಾರ್ ಮಾತನಾಡಿ, ಸಹಕಾರ ಸಚಿವ ಕೆ.ಎನ್.ರಾಜಣ್ಣರವರು ಸಾಕಷ್ಟು ಶ್ರಮ ವಹಿಸಿ ಕನ್ನಾಭಿಮಾನಿಗಳಿಗೆ ಒಳ್ಳೆಯ ಕನ್ನಡ ಭವನ ಕಟ್ಟಿಸಿ ಕೊಟ್ಟಿದ್ದು, ಇದನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿರುವುದು ಹೆಮ್ಮೆಯ ವಿಚಾರ, ವಿದ್ಯಾರ್ಥಿಗಳು ಶ್ರಮ ವಹಿಸಿ ಓದಿ ಯಶಸ್ಸು ಗಳಿಸಬೇಕು ಎಂದರು.
ಐಎಫ್‌ಎಸ್ ಅಧಿಕಾರಿ ಶಶಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಅತಿ ಮುಖ್ಯ,ಇಂದಿನ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ನಿರಂತರ ಅಭ್ಯಾಸ ಬೇಕು.ಪರೀಕ್ಷೆಗಳ ಬಗ್ಗೆ ಧೈರ್ಯ ಬೇಕು. ಸೋಲು ಗೆಲುವಿನ ಮೆಟ್ಟಿಲು ಎಂಬಂತೆ ಸತತ ಪರಿಶ್ರಮದಿಂದ ಗುರಿ ಮುಟ್ಟಲು ಸಾಧ್ಯ ಎಂದರು.ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ , ತಾಲೂಕು ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ, ಬಿಇಓ ಕೆ.ಎನ್.ಹನುಮಂತರಾಯಪ್ಪ, ಡಿವೈಎಸ್‌ಪಿ ರಾಮಚಂದ್ರಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಶಂಕರನಾರಾಯಣಶಟ್ಟಿ, ಎಂ.ಕೆ.ನಂಜುಂಡಯ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಟಿ.ಸಿದ್ದೇಶ್ವರ, ಪದಾಧಿಕಾರಿಗಳಾದ ಎಂ.ಎಸ್.ಶಂಕರನಾರಾಯಣ್ ,ಜಗದೀಶ್‌ಕುಮಾರ್, ರಾಮಚಂದ್ರಪ್ಪ, ರುದ್ರರಾಧ್ಯ, ಪ್ರಸಾದ್, ಮೂಡ್ಲಗಿರೀಶ್, ರಂಗಧಾಮಯ್ಯ ಸೇರಿದಂತೆ ಅನೇಖರಿದ್ದರು.