ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಬಾಂಗ್ಲಾ ದೇಶದ ಹಿಂದೂಗಳ ಮೇಲೆ ಅಲ್ಲಿನ ಜಯಾಯಿತ್ ಎಂಬ ಭಯೋತ್ಪಾದನೆ ಸಂಘಟನೆ ಕಾರ್ಯಕರ್ತರು ದೌರ್ಜನ್ಯ ಮಾಡುತ್ತಿದ್ದು ಇದನ್ನು ವಿರೋಧಿಸಿ ಅಲ್ಲಿನ ಹಿಂದೂಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ನ ಶೃಂಗೇರಿ ಕ್ಷೇತ್ರದ ಮುಖಂಡ ಕೆ.ಪಿ.ಸುರೇಶ್ ಕುಮಾರ್ ತಿಳಿಸಿದರು.ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಿಂದೂ ಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ ಬಾಂಗ್ಲಾ ದೇಶದಲ್ಲಿ ಹಿಂದೂ ಗಳ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಮಾನವ ಸರಪಳಿ ನಿರ್ಮಿಸಿ ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯವನ್ನು ಭಾರತೀಯ ಹಿಂದೂಗಳೇ ನಿರ್ಲಕ್ಷ್ಯ ಮಾಡಿ ದರೆ ಮುಂದೆ ಭಾರತದ ಹಿಂದೂಗಳ ಮೇಲೂ ದೌರ್ಜನ್ಯ ನಡೆಯುವ ಸಾಧ್ಯತೆ ಇದೆ. ಹಿಂದೂಗಳ ದೌರ್ಜನ್ಯದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದರು. ಈ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ನೀಡಲಾಗುವುದು ಎಂದರು.
ಬಹಳ ವರ್ಷಗಳ ಹಿಂದೆ ಬಾಂಗ್ಲಾ ದೇಶ ಪಾಕಿಸ್ತಾನದ ಒಂದು ಭಾಗವಾಗಿತ್ತು. ನಂತರ ಬಾಂಗ್ಲಾ ಸ್ವತಂತ್ರ ದೇಶ ವಾಯಿತು. ಅವರು ಸ್ವತಂತ್ರವಾಗಲು ಭಾರತೀಯ ಸೈನಿಕರ ಶ್ರಮವೇ ಕಾರಣವಾಗಿದೆ. ಅದನ್ನು ಮರೆತ ಬಾಂಗ್ಲಾ ದೇಶ ದವರು ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿರುವುದು ವಿಷಾದಕರ ಎಂದರು.ಪ್ರತಿಭಟನೆಯಲ್ಲಿ ಹಿಂದೂ ಹಿತ ರಕ್ಷಣಾ ಸಮಿತಿ ಮಖಂಡರಾದ ಆಶೀಶ್ ಕುಮಾರ್, ಜೆ.ಜಿ.ನಾಗರಾಜ್, ಎಂ.ವಿ. ರಾಜೇಂದ್ರ ಕುಮಾರ್, ಜಯರಾಂ, ಕೆಸವಿ ಮಂಜುನಾಥ್, ಅಶ್ವನ್, ಎನ್.ಡಿ.ಪ್ರಸಾದ್, ಅರುಣ ಕುಮಾರ್ ಜೈನ್, ದರ್ಶನ್, ಹಂಚಿನಮನೆ ರಾಘವೇಂದ್ರ, ಮಂಜುನಾಥ್ ಲಾಡ್, ದ್ವಾರಮಕ್ಕಿ ಶ್ರೀನಾಥ್, ಸುರಭಿ ರಾಜೇಂದ್ರ, ಮಧು ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಬಾಂಗ್ಲಾ ಭಯೋತ್ಪಾದಕರ ವಿರುದ್ದ ಘೋಷಣೆ ಕೂಗಲಾಯಿತು.