ಎಂಪಿಎಂಸಿಯಲ್ಲಿ 10 ಕೆಜಿ ಬೀನ್ಸ್ ಒಂದು ಸಾವಿರದಿಂದ 1300 ರು. । ಇತರೆ ತರಕಾರಿಗಳ ಬೆಲೆಯೂ ಏರಿಕೆ
ಜಿಲ್ಲೆಯಲ್ಲಿ ಕಳೆದ ತಿಂಗಳು ತರಕಾರಿ ದರ ಕುಸಿದ ಪರಿಣಾಮ ರೈತರ ಹೊಟ್ಟೆ ಮೇಲೆ ಬರೆ ಎಳೆಯುವಂತೆ ಆಗಿತ್ತು. ಆದರೆ ಜಿಲ್ಲೆಯಲ್ಲಿ ಈಗ ಬೀನ್ಸ್ ಮತ್ತು ಸೌತೆಕಾಯಿ ಬೆಳೆಗಳು ರೈತರಿಗೆ ಉತ್ತಮ ಆದಾಯ ತಂದುಕೊಡುವ ಮೂಲಕ ಅವರ ಮೊಗದಲ್ಲಿ ಮಂದಹಾಸ ಮೂಡಿಸಿವೆ.
ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೇಸಿಗೆಯನ್ನು ಲೆಕ್ಕಿಸದೆ ವಿವಿಧ ತರಕಾರಿ ಬಂಪರ್ ಬೆಳೆಗಳನ್ನು ಬೆಳೆದ ರೈತರು, ಮಾರುಕಟ್ಟೆಗೆ ತಂದಾಗ ತರಕಾರಿ ಬೆಲೆಗಳು ಕುಸಿದಿತ್ತು. ಔಷಧಿಗಳು ರೇಟ್ ನೋಡಿದರೆ ಗಗನಕ್ಕೆ ಏರಿದೆ ಎಂದು ರೈತರು ನೋವು ಪಡುತ್ತಿದ್ದರು. ಆದರೆ ಇದೀಗ ಬೀನ್ಸ್ ಮತ್ತು ಸೌತೆಕಾಯಿ ಸೇರಿದಂತೆ ಅನೇಕ ತರಕಾರಿಗಳು ಬೆಲೆ ಏರಿಕೆ ಆಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.ನಗರದ ರಸ್ತೆ ಪಕ್ಕದಲ್ಲಿ ತರಕಾರಿಗಳು 100 ರು.ಗೆ 3 ರಿಂದ 4 ಕೆಜಿ ಮಾರಾಟ ಮಾಡುತ್ತಿದ್ದರು. ಬೆಲೆ ಏರಿಕೆ ಹಿನ್ನೆಲೆ ಈಗ 100 ರು.ಗೆ ಎರಡು- ಎರಡೂವರೆ ಕೆಜಿ ಮಾತ್ರ ಮಾರಾಟ ಮಾಡುತ್ತಿದ್ದಾರೆ.
ತೀವ್ರ ಬಿಸಿಲಿನ ತಾಪ, ನೀರಿನ ಕೊರತೆ ಮತ್ತು ಇಳುವರಿ ಕುಸಿತದಿಂದಾಗಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಬೀನ್ಸ್ ಚಿಲ್ಲರೆ ದರವು ಕೆ.ಜಿ.ಗೆ ರು. 160 ರಿಂದ ರು. 200ರ ಗಡಿ ದಾಟಿದೆ. ಹೆಚ್ಚುತ್ತಿರುವ ಸಾಗಾಣಿಕೆ ವೆಚ್ಚ ಮತ್ತು ಬೇಡಿಕೆಯಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ರೈತರು ಸಾಲ ಮಾಡಿ ಬೆಳೆಗಳನ್ನು ಬೆಳೆಯುತ್ತಾರೆ. ರೈತರು ಬೆಳೆದ ಬೆಳೆಗೆ ಉತ್ತಮವಾದ ಬೆಲೆ ಸಿಕ್ಕಿದಾಗ ಮಾತ್ರ ಅವರು ಸಂತೋಷವಾಗಿರಲು ಸಾಧ್ಯ. ಜಿಲ್ಲೆಯಲ್ಲಿ ರೈತರು ಬೆಳೆದ ತರಕಾರಿಗಳು, ಹೂವು, ಹಣ್ಣುಗಳು, ಹೊರ ರಾಜ್ಯಕ್ಕೆ ಸಹ ತೆಗೆದುಕೊಂಡು ಹೋಗುತ್ತಾರೆ.