ದಲಿತ ನೌಕರನ ಮೇಲೆ ಮೇಲಧಿಕಾರಿ ಸುಳ್ಳು ವರದಿ ಪ್ರಹಾರ ಮಾಡಿ, ಆತನ ಅಮಾನತು ಆಗಿದೆ ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಬಿ.ಎಚ್ ರಸ್ತೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು
ಕನ್ನಡಪ್ರಭ ವಾರ್ತೆ ಭದ್ರಾವತಿ
ಇಲ್ಲಿನ ಅರಣ್ಯ ವಿಭಾಗದ ಮಾವಿನಕೆರೆ ವಲಯದಲ್ಲಿ ಬೀಟ್ ಫಾರೆಸ್ಟ್ (ಗಸ್ತು ವನಪಾಲಕ) ದಲಿತ ನೌಕರನ ವಿರುದ್ಧ ಸುಳ್ಳು ವರದಿ ನೀಡಿ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಬಿ.ಎಚ್.ರಸ್ತೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮಾವಿನಕೆರೆ ವಲಯದಲ್ಲಿ ಬೀಟ್ ಫಾರೆಸ್ಟ್ ಆಗಿ ದಲಿತ ನೌಕರ ರಾಮು ದೊಡ್ಮನೆ ಎಂಬುವರು ಕಳೆದ ೮ ವರ್ಷಗಳಿಂದ ಮಾವಿನಕೆರೆ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ವಲಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಗದೀಶ್‌ರವರಿಗೆ ಮೇಲಾಧಿಕಾರಿಗಳಿಂದ ತಾಲೂಕಿನ ಗುಡಮಘಟ್ಟ ಗ್ರಾಮದ ಸರ್ವೆ ನಂ.೪೩ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ರೈತರು ಅಕ್ರಮ ಸಾಗುವಳಿ ಮಾಡಿರುವ ಕುರಿತು ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಗದೀಶ್‌ರವರು ರಾಮು ಅವರಿಗೆ ಗುಡಮಘಟ್ಟ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ. ರಾಮುರವರು ಸ್ಥಳಕ್ಕೆ ತೆರಳಿ ಸರ್ವೆ ಕಾರ್ಯ ನಡೆಸಿ ಪ್ರಾಮಾಣಿಕವಾಗಿ ವರದಿ ಸಲ್ಲಿಸಿದ್ದಾರೆ. ಆದರೆ, ಜಗದೀಶ್‌ರವರು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಅರಣ್ಯ ಇಲಾಖೆ ಭೂಮಿಯನ್ನು ಕಂದಾಯ ಇಲಾಖೆ ಭೂಮಿ ಎಂಬುದಾಗಿ ಸುಳ್ಳು ವರದಿ ನೀಡಿದ್ದಾರೆಂದು ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಜಗದೀಶ್‌ರವರು ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ಈ ರೀತಿ ಮಾಡಿದ್ದು, ಅಮಾನತು ಆದೇಶ ಪತ್ರ ಬಂದ ನಂತರ ಆರೋಗ್ಯ ನೆಪ ಹೇಳಿ ಜಗದೀಶ್‌ರವರು ಸುಮಾರು ೧೫ ದಿನ ಕರ್ತವ್ಯಕ್ಕೆ ರಜಾ ಸಲ್ಲಿಸಿದ್ದಾರೆಂದು ದಲಿತ ಮುಖಂಡರು ಆರೋಪಿಸಿದರು. ತಕ್ಷಣ ರಾಮು ಅವರ ಮೇಲಿನ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಬೇಕು. ತಕ್ಷಣ ರಾಮು ಅವರನ್ನು ಕರ್ತವ್ಯ ಸೇರ್ಪಡೆ ಮಾಡಿಕೊಳ್ಳ ಬೇಕು. ಜಗದೀಶ್‌ರವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸತ್ಯ ಭದ್ರಾವತಿ ಮತ್ತು ಜಿಲ್ಲಾ ಸಂಚಾಲಕ ಚಿನ್ನಯ್ಯ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಮುಖಂಡರಾದ ಸಿ. ಜಯಪ್ಪ ಹೆಬ್ಬಲಗೆರೆ, ಈಶ್ವರಪ್ಪ, ಮಣಿ ಜಿಂಕ್‌ಲೈನ್, ಪರಮೇಶ್ವರಪ್ಪ, ಎನ್. ಗೋವಿಂದ, ಸುಬ್ರಮಣಿ(ಕಬಡ್ಡಿ), ಈಶ್ವರಪ್ಪ(ನಗರಸಭೆ), ಸಂದೀಪ್, ಸುರೇಶ್(ಕೂಡ್ಲಿಗೆರೆ), ಎನ್. ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.