ಕುಮಟಾ: ಭಾರತದ ಸಂವಿಧಾನದಡಿ ಪ್ರದತ್ತವಾದ ಕಾನೂನುಗಳನ್ನು ಎಲ್ಲ ವಿದ್ಯಾರ್ಥಿಗಳು ಅರಿತುಕೊಂಡು ತಮ್ಮ ಜೀವನದಲ್ಲಿ ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ವಕೀಲೆ ರಾಘವಿ ನಾಯಕ ಹೇಳಿದರು.
ನಮ್ಮ ಕಾನೂನಿನಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ವಿಶೇಷ ಆದ್ಯತೆಗಳಿವೆ. ಇದರ ಅರಿವಿನ ಕೊರತೆಯಿಂದ ಹಲವು ಸಂದರ್ಭಗಳಲ್ಲಿ ಮಹಿಳೆಯರು ಸಂತ್ರಸ್ತರಾಗುತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಈ ಕುರಿತು ವಿಶೇಷ ಕಾನೂನಿನ ಅರಿವು ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿನಿಯರು ಕಾನೂನಿನ ಜ್ಞಾನವನ್ನು ಪಡೆದುಕೊಳ್ಳಬೇಕು. ಮಹಿಳಾ ಸಬಲೀಕರಣವಾಗಬೇಕು. ಶಾಲಾ-ಕಾಲೇಜು ಸಹಿತ ಉದ್ಯೋಗ ಸ್ಥಳಗಳಲ್ಲೂ ನಡೆಯುವ ಲೈಂಗಿಕ ಕಿರುಕುಳ, ಮಹಿಳಾ ದೌರ್ಜನ್ಯ ಮೊದಲಾದವುಗಳನ್ನು ತಡೆಗಟ್ಟಬೇಕು. ಬಡ ಅಸಹಾಯಕ ಮಹಿಳೆಯರಿಗೆ ಉಚಿತವಾಗಿ ಕಾನೂನಿನ ನೆರವನ್ನು ನೀಡಲು ಉಚಿತ ಕಾನೂನು ಸೇವಾ ಕೇಂದ್ರಗಳನ್ನು ಎಲ್ಲಾ ನ್ಯಾಯಾಲಯಗಳಲ್ಲಿ ಸ್ಥಾಪಿಸಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಸಂವಾದದ ಮೂಲಕ ವಿದ್ಯಾರ್ಥಿನಿಯರ ಸಂದೇಹಗಳಿಗೆ ಉತ್ತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎನ್.ಡಿ. ನಾಯ್ಕ ಮಾತನಾಡಿ, ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಹಿತ ರಕ್ಷಣೆ ಮತ್ತು ಕುಂದುಕೊರತೆ ಆಲಿಸಲು ಹಲವಾರು ವರ್ಷಗಳಿಂದ ಮಹಿಳಾ ಘಟಕ ಅಸ್ತಿತ್ವದಲ್ಲಿದೆ. ವಿದ್ಯಾರ್ಥಿನಿಯರಿಗಾಗಿ ಹಲವಾರು ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ. ವಿದ್ಯಾರ್ಥಿ ದೆಸೆಯಿಂದಲೇ ಕಾನೂನಿನ ಅರಿವು ಮೂಡಿಸಿಕೊಳ್ಳಲು ಇಂತಹ ಕಾರ್ಯಕ್ರಮ ತುಂಬಾ ಪ್ರಯೋಜನಕಾರಿ ಎಂದರು.ಯೂನಿಯನ್ ಕಾರ್ಯಧ್ಯಕ್ಷ ಡಾ.ಅರವಿಂದ ನಾಯಕ, ಮಹಿಳಾ ಘಟಕದ ಸಂಯೋಜಕಿ ಪ್ರೊ. ಸುಷ್ಮಾ, ಪ್ರೊ. ಸುಮಾ ವೇದಿಕೆಯಲ್ಲಿದ್ದರು.