ಸಿದ್ದಾಪುರ: ನರೇಂದ್ರ ಮೋದಿ ೧೧ ವರ್ಷಗಳ ಆಡಳಿತದ ಕಾರಣಕ್ಕಾಗಿ ಜಾಗತಿಕ ವೇದಿಕೆಯಲ್ಲಿ ಭಾರತದ ಮೇಲೆ ಗೌರವ ಹೆಚ್ಚಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದರು.ಅವರು ಪಟ್ಟಣದ ಬಾಲಭವನದಲ್ಲಿ ಮೋದಿ ಸರ್ಕಾರದ ೧೧ ವರ್ಷಗಳು- ಸಂಕಲ್ಪದಿಂದ ಸಾಧನೆಯವರೆಗೆ ಅಭಿಯಾನದ ಪೂರ್ವಸಿದ್ಧತೆಗಾಗಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವೈಯಕ್ತಿಕ ನೆಲೆಯಲ್ಲಿ ಮತ್ತು ಸಂಘ ಸಂಸ್ಥೆಗಳು ಹಾಗೂ ಪಕ್ಷದ ವತಿಯಿಂದ ವೃಕ್ಷಾರೋಪಣ ಕಾರ್ಯಕ್ರಮ ವ್ಯಾಪಕವಾಗಿ ಮಾಡೋಣ. ಯೋಗ ದಿನದ ಜೊತೆಗೆ ಯೋಗ ಶಿಬಿರಗಳನ್ನು ಸಹ ಆಯೋಜನೆ ಮಾಡಬಹುದು. ನಮೋ ಸರ್ಕಾರದ ಸಾಧನೆಗಳನ್ನು ಜನರ ನಡುವೆ ಇನ್ನಷ್ಟು ತಿಳಿಸುವ ಪ್ರಯತ್ನ ಮಾಡೋಣ. ಆಯುಷ್ಮಾನ್ ಭಾರತ್, ವಯೋ ವಂದನ ಯೋಜನೆಗಳಿಗೆ ಫಲಾನುಭವಿಗಳ ನೋಂದಣಿ ಕಾರ್ಯ ಕೂಡ ಮಾಡಬೇಕು. ವೃತ್ತಿಪರರ ಸಭೆ, ಡಾ. ಶ್ಯಾಮಪ್ರಸಾದ ಮುಖರ್ಜಿ ಬಲಿದಾನ ದಿವಸ, ಮತ್ತು ಸಂವಿಧಾನ ಕಗ್ಗೊಲೆಗೊಳಿಸಿದ ತುರ್ತು ಪರಿಸ್ಥಿತಿ ಕರಾಳ ದಿನ ಕೂಡಾ ಆಯೋಜನೆ ಆಗಬೇಕು ಎಂದು ಅಭಿಯಾನದ ಸ್ವರೂಪ, ಚಟುವಟಿಕೆಗಳು ಹಾಗೂ ಸಮಯಸಾರಿಣಿ ಒಳಗೊಂಡ ಮಾಹಿತಿ ನೀಡಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ ಹಣಜಿಬೈಲ್ ಮಾತನಾಡಿ, ವಿಚಾರ ಸಂಕಿರಣ, ವೃತ್ತಿಪರರ ಸಭೆಗಳಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸೋಣ. ತುರ್ತು ಪರಿಸ್ಥಿತಿಯ ಸಂದರ್ಭ ಕಷ್ಟ ಅನುಭವಿಸಿದ ಹಿರಿಯರಿಗೆ ಗೌರವ ಸಲ್ಲಿಸೋಣ. ಇಂದಿರಾ ಗಾಂಧಿ ಅಧಿಕಾರ ಉಳಿಸಿಕೊಳ್ಳಲು ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ ವಿಚಾರ ಜನರಿಗೆ ತಿಳಿಸುವ ಕೆಲಸ ಆಗಬೇಕು ಎಂದರು.ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಅಭಿಯಾನದ ತಂಡದ ಸಂಚಾಲಕರು ಹಾಗೂ ಸಹ ಸಂಚಾಲಕರ ಘೋಷಣೆ ಮಾಡಿದರು.
ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಬರ‍್ಕರ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಜಿಲ್ಲಾ ವಿಶೇಷ ಆಹ್ವಾನಿತ ಗುರುರಾಜ ಶಾನಭಾಗ, ಪಪಂ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ ಉಪಸ್ಥಿತರಿದ್ದರು.ಮಂಡಲ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ ಸ್ವಾಗತಿಸಿದರು.ಮತ್ತೊರ್ವ ಪ್ರಧಾನ ಕಾರ್ಯದರ್ಶಿ ಎಸ್. ಕೆ. ಮೇಸ್ತ ನಿರ್ವಹಿಸಿದರು. ಬಿ. ವೆಂಕಟೇಶ ವಂದಿಸಿದರು.