ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗುವುದು ಮುಖ್ಯ: ಸಂಸದ

KannadaprabhaNewsNetwork |  
Published : Jul 27, 2026, 01:15 AM IST
 ಸಿಕೆಬಿ-6 ಮಂಚೇನಹಳ್ಳಿ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಂಚೇನಹಳ್ಳಿ  ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅರ್ಹ ವಿದ್ಯಾರ್ಥಿಗಳಿಗೆ ಜ್ಞಾನ ಸುಧಾ ಸ್ಕಾಲಶಿಫ್ ಯೋಜನೆಯಡಿ ತಲಾ 5 ಸಾವಿರ ರೂಗಳ ಚೆಕ್ ಅನ್ನು ಸಂಸದ ಡಾ.ಕೆ.ಸುಧಾಕರ್ ವಿತರಿಸಿದರು | Kannada Prabha

ಸಾರಾಂಶ

ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ ಒಂದು ಪುಟ ಓದುವ ಅಭ್ಯಾಸ ಆರಂಭಿಸಬೇಕು. ಪಠ್ಯಪುಸ್ತಕಗಳಷ್ಟೇ ಅಲ್ಲದೆ ಪತ್ರಿಕೆ, ಕಾದಂಬರಿ, ಕಥೆ ಅಥವಾ ಇತಿಹಾಸದ ಪುಸ್ತಕಗಳಿಂದಲೂ ಓದಬಹುದು.

ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಜ್ಞಾನ ಸುಧಾ ಸ್ಕಾಲರ್‌ಶಿಪ್‌ ಯೋಜನೆಯಡಿ ತಲಾ 5 ಸಾವಿರ ರು.ಗಳ ಚೆಕ್ ವಿತರಣೆಗೆ ಚಾಲನೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿದ್ಯಾರ್ಥಿಗಳು ತಾವು ಕಂಡ ಕನಸು ನನಸಾಗಿಸಲು ನಿರಂತರ ಪರಿಶ್ರಮ ಮತ್ತು ಶಿಸ್ತಿನ ದಿನಚರಿಯನ್ನು ಯಶಸ್ಸಿನ ಆಧಾರವಾಗಿ ಅಳವಡಿಸಿಕೊಳ್ಳಬೇಕು. ಯಶಸ್ಸಿಗಿಂತ ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗುವುದು ಮುಖ್ಯವಾಗಿದ್ದು, ಪೋಷಕರಿಗೆ ಗೌರವ, ಪ್ರೀತಿ ಮತ್ತು ಸಮಯ ನೀಡಬೇಕು ಎಂದು ಸಂಸದ ಡಾ.ಕೆ. ಸುಧಾಕರ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಜಿಲ್ಲೆಯ ಮಂಚೇನಹಳ್ಳಿ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಮಂಚೇನಹಳ್ಳಿ ವ್ಯಾಪ್ತಿಯ ಅರ್ಹ ವಿದ್ಯಾರ್ಥಿಗಳಿಗೆ ಜ್ಞಾನ ಸುಧಾ ಸ್ಕಾಲರ್‌ಶಿಪ್‌ ಯೋಜನೆಯಡಿ ತಲಾ 5 ಸಾವಿರ ರು.ಗಳ ಚೆಕ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ ಒಂದು ಪುಟ ಓದುವ ಅಭ್ಯಾಸ ಆರಂಭಿಸಬೇಕು. ಪಠ್ಯಪುಸ್ತಕಗಳಷ್ಟೇ ಅಲ್ಲದೆ ಪತ್ರಿಕೆ, ಕಾದಂಬರಿ, ಕಥೆ ಅಥವಾ ಇತಿಹಾಸದ ಪುಸ್ತಕಗಳಿಂದಲೂ ಓದಬಹುದು. ಎಲಾನ್ ಮಸ್ಕ್, ಅಂಬಾನಿ ಮತ್ತು ಬಿಲ್ ಗೇಟ್ಸ್‌ರನ್ನು ಉದಾಹರಿಸಿ, ಯಶಸ್ವಿ ವ್ಯಕ್ತಿಗಳ ಗುಟ್ಟಿನಲ್ಲಿ ಓದುವ ಅಭ್ಯಾಸ ಪ್ರಮುಖವಾಗಿದೆ. ಇತರರೊಂದಿಗೆ ಹೋಲಿಕೆ ಮಾಡುವ ಬದಲು ನಿನ್ನೆಗಿಂತ ಇಂದು ಉತ್ತಮವಾಗಲು ಮತ್ತು ಇಂದಿಗಿಂತ ನಾಳೆ ಉತ್ತಮವಾಗಲು ಪ್ರಯತ್ನಿಸಬೇಕು. 2047ರ ಭಾರತದ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಮಾನವೀಯತೆ ಮತ್ತು ತಂತ್ರಜ್ಞಾನವನ್ನು ಸಮನ್ವಯಗೊಳಿಸಬೇಕು ಎಂದರು.

ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ:

ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಹಂತಗಳಲ್ಲಿ 100ಕ್ಕೆ 100 ಸಾಧನೆ ಮಾಡಿರುವುದಕ್ಕಾಗಿ ಸಮಾಜದ ಪರವಾಗಿ ಅಭಿನಂದಿಸಿದರು. 5,000 ರು.ಗಳ ಸ್ಕಾಲರ್‌ಶಿಪ್‌ಗಳ ಮೂಲಕ ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸುವ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರಲ್ಲದೇ, 2026ರಿಂದ 2036ರ ವರೆಗೆ ಹತ್ತು ವರ್ಷಗಳ ಬಳಿಕ ಪ್ರತಿಯೊಬ್ಬರೂ ತಮ್ಮನ್ನು ಯಾವ ಕ್ಷೇತ್ರದಲ್ಲಿ ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳ ಮುಂದಿಡಲಾಯಿತು. ನ್ಯಾಯಾಧೀಶರು, ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು ಅಥವಾ ನಟರು,ಯಾವ ವೃತ್ತಿಯನ್ನು ಆಯ್ಕೆ ಮಾಡಿದರೂ ಸಮಾಜಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಸಾಧಿಸಬೇಕು ಎಂಬ ಸಲಹೆ ಸಂಸದರು ನೀಡಿದರು.

ತ್ಯಾಗ ಮತ್ತು ಪರಿಶ್ರಮ:

ಕನಸು ಕಾಣುವುದು ಸಾಧನೆಯ ಮೊದಲ ಆಯುಧವಾಗಿದೆ, ನಾನು ಇಂತದ್ದು ಆಗಬೇಕು ಎಂಬ ಸ್ಪಷ್ಟ ಗುರಿ ವಿದ್ಯಾರ್ಥಿಗಳಲ್ಲಿ ಇರಬೇಕು. ನಟ ಯಶ್ ಅವರ ಉದಾಹರಣೆಯ ಮೂಲಕ ಕ್ಯಾಮೆರಾ ಮುಂದೆ ಕಾಣುವ ಯಶಸ್ಸಿನ ಹಿಂದೆ ತ್ಯಾಗ, ಕಷ್ಟ, ಬೆವರು, ಕಣ್ಣೀರು ಮತ್ತು ನಿರಂತರ ಪರಿಶ್ರಮ ಇರುತ್ತದೆ. ಸಾಮಾನ್ಯ ಬಸ್ ಚಾಲಕರ ಕುಟುಂಬದಿಂದ ಬಂದ ಯಶ್ ಬೆಂಗಳೂರಿನಲ್ಲಿ ಕಷ್ಟಗಳನ್ನು ಎದುರಿಸುತ್ತಾ ನಟನಾಗುವ ದೃಢಸಂಕಲ್ಪ ಉಳಿಸಿಕೊಂಡರು ಎಂಬ ಉದಾಹರಣೆ ನೀಡಿ, ವಿದ್ಯಾರ್ಥಿಗಳು ನಿರ್ದಿಷ್ಟ ವೃತ್ತಿಯನ್ನು ಆರಿಸಲೇಬೇಕು ಎಂಬ ಒತ್ತಡವಿಲ್ಲ,ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಸಹಾಯ ಮಾಡುವ ರೀತಿಯಲ್ಲಿ ಬೆಳೆಯಬೇಕು ಎಂದು ಹೇಳಿದರು.

ಶಿಸ್ತು ಮತ್ತು ದಿನಚರಿಯೇ ಫಲಿತಾಂಶದ ಮೂಲ:

ಒಂದು ದಿನ ಪುಸ್ತಕ ಓದುವುದರಿಂದ ವಿಜ್ಞಾನಿಯಾಗಲು ಅಥವಾ ಒಂದು ದಿನ ಜಿಮ್‌ಗೆ ಹೋಗುವುದರಿಂದ ದೇಹದಲ್ಲಿ ಶಾಶ್ವತ ಬದಲಾವಣೆ ತರಲು ಸಾಧ್ಯವಿಲ್ಲ. "ದ ರೊಟೀನ್ ಲೀಡ್ಸ್ ಟು ರಿಸಲ್ಟ್ " ಎಂಬ ಸಂದೇಶದ ಮೂಲಕ ಜನರಿಗೆ ಕಾಣುವುದು ಫಲಿತಾಂಶ ಮಾತ್ರ, ಅದರ ಹಿಂದೆ ಇರುವ ನಿರಂತರ ದಿನಚರಿ ಮರೆಯಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಫೋನ್ ನೋಡುವುದು, ರೀಲ್ಸ್ ವೀಕ್ಷಿಸುವುದು ಮತ್ತು ಐದು ನಿಮಿಷವೆಂದು ಆರಂಭಿಸಿ ಒಂದು ಗಂಟೆ ಕಳೆಯುವುದು ವಿದ್ಯಾರ್ಥಿಗಳ ಸಮಯ ಹಾಗೂ ಗಮನವನ್ನು ಹಾಳುಮಾಡುತ್ತದೆ ಎಂದು ಎಚ್ಚರಿಸಿದರು.

ಸಾಮಾಜಿಕ ಮಾಧ್ಯಮದ ಅಲ್ಗೋರಿದಮ್ ಬಳಕೆದಾರರ ಆಸಕ್ತಿಗೆ ತಕ್ಕಂತೆ ಒಂದೇ ರೀತಿಯ ವೀಡಿಯೊಗಳನ್ನು ನಿರಂತರವಾಗಿ ತೋರಿಸುತ್ತದೆ, ಇದರಿಂದ ಬಳಕೆದಾರರು ಅದರ ಪ್ರಭಾವಕ್ಕೆ ಒಳಗಾಗುತ್ತಾರೆ. ಪ್ರೇರಣಾತ್ಮಕ ವೀಡಿಯೊಗಳನ್ನು ನೋಡುವುದಷ್ಟೇ ಸಾಕಾಗುವುದಿಲ್ಲ, ಸ್ವಯಂಪ್ರೇರಣೆ, ಬೆಳಗಿನ ನಿಯಮಿತ ಜೀವನ, ಅಲಾರಂ ನಂತರ ಎದ್ದು ಕಾರ್ಯಪ್ರವೃತ್ತರಾಗುವ ಅಭ್ಯಾಸ ಮತ್ತು ನಿರಂತರ ಶಿಸ್ತು ಅಗತ್ಯವೆಂದು ತಿಳಿ ಹೇಳಿದರು.

ಸಮಾಜೋಪಯೋಗಿ ಬದುಕಿನ ಮಹತ್ವ:

ಶ್ರೀಮಂತಿಕೆ, ದೊಡ್ಡ ಹುದ್ದೆ ಮತ್ತು ಅಧಿಕಾರ ಮುಖ್ಯವಾದರೂ ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗುವುದು ಅದಕ್ಕಿಂತ ಮಹತ್ವದ್ದು.“ಮೋರ್ ದನ್ ಸಕ್ಸಸ್ , ಹೌಯೂಸ್ ಫುಲ್ ” ಎಂಬ ತತ್ವವನ್ನು ಜೀವನದ ಮಾರ್ಗದರ್ಶಕವಾಗಿ ನೀಡಿ, ಒಬ್ಬ ವ್ಯಕ್ತಿಗೆ ಸಹಾಯ ಮಾಡುವ ಸಾಮರ್ಥ್ಯವಿದ್ದರೂ ಅದನ್ನು ಬಳಸುವುದು ಅರ್ಥಪೂರ್ಣ ಜೀವನದ ಆರಂಭವೆಂದು ವಿವರಿಸಿ, ಕೆಟ್ಟ ವಸತಿ ಸೌಲಭ್ಯಗಳ ಸಮಸ್ಯೆಯನ್ನು ಗಮನಿಸಿ ರಿತೇಶ್ ಅಗರ್ವಾಲ್ ಮತ್ತು ಅವರ ಇಬ್ಬರು ಸ್ನೇಹಿತರು ಓಯೋ ಕಂಪನಿಯನ್ನು ಸ್ಥಾಪಿಸಿದ ಉದಾಹರಣೆಯ ಮೂಲಕ ಸಮಸ್ಯೆಗಳನ್ನು ಅವಕಾಶಗಳಾಗಿ ಪರಿವರ್ತಿಸಬಹುದು ಎಂಬುದನ್ನು ತಿಳಿಸಿದರಲ್ಲದೇ, ಸಮಸ್ಯೆ ಪರಿಹಾರದಿಂದ ಉದ್ಯಮ, ಉದ್ಯೋಗ ಸೃಷ್ಟಿ ಮತ್ತು ಸಮಾಜದ ಅಭಿವೃದ್ಧಿಗೆ ದಾರಿ ತೆರೆಯಬಹುದು ಎಂಬ ಉದ್ಯಮಶೀಲತೆಯ ಸಂದೇಶ ನೀಡಿದರು.

2047ರ ಭಾರತದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ:

2047ರಲ್ಲಿ ಭಾರತದ ಸ್ವಾತಂತ್ರ್ಯಕ್ಕೆ 100 ವರ್ಷಗಳು ತುಂಬುವಾಗ ದೇಶವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬ ಹೊಣೆಗಾರಿಕೆ ಇಂದಿನ ವಿದ್ಯಾರ್ಥಿಗಳ ಮೇಲಿದೆ. ಕೃತಕ ಬುದ್ದಿ ಮೆತ್ತೆ ಮತ್ತು ಯಾಂತ್ರಿಕ ಕಲೀಕಾಕರಣ, ರೋಬೋಟ್ಸ್ ಮತ್ತು ಹೊಸ ತಂತ್ರಜ್ಞಾನಗಳು ಬೆಳೆಯುತ್ತಿದ್ದರೂ ಮಾನವನ ಆಲೋಚನಾ ಶಕ್ತಿ ಮತ್ತು ಮಾನವೀಯ ಗುಣಗಳನ್ನು ಯಂತ್ರಗಳು ಸಂಪೂರ್ಣವಾಗಿ ಬದಲಾಯಿಸಲಾರವು.

ಕೆಲವು ಉದ್ಯೋಗಗಳು ತಂತ್ರಜ್ಞಾನದಿಂದ ಬದಲಾಗಬಹುದು, ಆದ್ದರಿಂದ ವಿದ್ಯಾರ್ಥಿಗಳು ಮಾನವೀಯತೆ, ಪ್ರೀತಿ, ಕ್ಷಮೆ, ಸೌಜನ್ಯ ಮತ್ತು ಸಮಾಜಮುಖಿ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜಾತಿ, ಧರ್ಮ ಅಥವಾ ರಾಜಕೀಯ ಭಿನ್ನತೆಯಿಂದ ಯಾರನ್ನೂ ದ್ವೇಷಿಸದೆ, ಸಮಾಜದ ಆರೋಗ್ಯ ಮತ್ತು ಸಾಮರಸ್ಯವನ್ನು ಕಾಪಾಡುವ ಉತ್ತಮ ನಾಗರಿಕರಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಈ ವೇಳೆ ಸ್ಥಳೀಯ ಮುಖಂಡರು, ಪೋಷಕರು, ಶಿಕ್ಷಕರು, ಬಂಧುಗಳು ಇದ್ದರು.

ಸಿಕೆಬಿ-6 ಮಂಚೇನಹಳ್ಳಿ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಂಚೇನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅರ್ಹ ವಿದ್ಯಾರ್ಥಿಗಳಿಗೆ ಜ್ಞಾನ ಸುಧಾ ಸ್ಕಾಲಶಿಫ್ ಯೋಜನೆಯಡಿ ತಲಾ 5 ಸಾವಿರ ರು.ಗಳ ಚೆಕ್ ಅನ್ನು ಸಂಸದ ಡಾ.ಕೆ.ಸುಧಾಕರ್ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡದಾಳವಟ್ಟದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ
ಮುಸ್ಲಿಂ ಸಮುದಾಯವನ್ನು ಎಂದೂ ಟೀಕಿಸಿಲ್ಲ