ಕಳಸಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಗಮಕ ಕಾರ್ಯಕ್ರಮ
ಯುವ ಪೀಳಿಗೆಗೆ ಮನೆಯಲ್ಲಿ ಕಾವ್ಯ ಕಲಿಕೆ ವಾತಾವರಣವನ್ನು ಹಿರಿಯರು ಸೃಷ್ಟಿಸಿಕೊಡಬೇಕು ಎಂದು ಕಳಸಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಿ.ಕೆ.ರಾಜೇಶ್ ಹೇಳಿದರು.
ಕಳಸಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಗಮಕ ಕಾರ್ಯಕ್ರಮದಲ್ಲಿ ಮಾತನಾಡಿ ಅತ್ಯಂತ ಪ್ರಾಚೀನವಾದ ಗಮಕ ಕಲೆ ಸಂಸ್ಕಾರ ನೀಡುವಂತದ್ದು, ಕುಮಾರ ವ್ಯಾಸನು ತನ್ನನ್ನು ಮಹಾಭಾರತ ಬರೆದ ವ್ಯಾಸ ಮಹರ್ಷಿಯ ಪುತ್ರ ಎಂದು ತಿಳಿದುಕೊಂಡು ಕರ್ನಾಟ ಕಥಾ ಮಂಜರಿ ರಚನೆಯಿಂದ. ಈತನ ಪ್ರತಿ ಭಾಮಿನಿ ಷಟ್ಪದಿಗಳಲ್ಲೂ ಪದ ಚಮತ್ಕಾರವಿದೆ. ಇದನ್ನು ಅರಿತುಕೊಂಡರೆ, ಕತೆಯನ್ನು ಹೀಗೂ ಹೇಳಬಹುದೇ ಎನಿಸುತ್ತದೆ. ಮಕ್ಕಳು ಮನೆಯಲ್ಲಿ ಇವುಗಳನ್ನು ಗಮನಿಸಿದರೆ ಜ್ಞಾನ ವಿಸ್ತಾರವಾಗುತ್ತದೆ. ಅದಕ್ಕೆ ಹಿರಿಯರು ಮನೆಯಲ್ಲಿ ಕಾವ್ಯ ಕಲಿಕೆಯ ವಾತಾವರಣ ಸೃಷ್ಟಿಸಬೇಕು ಎಂದರು.ಪ್ರಾಚಾರ್ಯ ಎಚ್.ಎಂ.ನಾಗರಾಜರಾವ್ ಮಾತನಾಡಿ ಕಲೆಗಳ ಕುರಿತು ಪೂಜ್ಯ ಭಾವವಿದ್ದಾಗ ಅದರ ಶಾಸ್ತ್ರೀಯತೆ ಉಳಿಯುತ್ತದೆ. ಕಲಾವಿದ ತನ್ನ ಕಲೆ ಆಶಯಗಳನ್ನು ಮೊದಲು ತಾನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.