ಕ್ಯಾಂಪೇನ್ ಸ್ಟೋರಿ-5
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನ ಜೀವನದಿಯಾದ ಬೇಡ್ತಿ ವರದಾ ನದಿ ಜೋಡಣೆ ಯೋಜನೆಯ ಪ್ರಸ್ತಾಪ ಈಗ ನದಿಯುದ್ದಕ್ಕೂ ಕೋಲಾಹಲವನ್ನೇ ಸೃಷ್ಟಿಸಿದೆ. ಈ ನದಿ ನೀರನ್ನೇ ಅವಲಂಬಿಸಿದವರು ಕಳವಳಗೊಂಡು ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.ಪರಿಸರವಾದಿಗಳು, ಜನತೆ ಯೋಜನೆ ವಿರುದ್ಧ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ನೇತೃತ್ವದಲ್ಲಿ ಹೋರಾಟ ಆರಂಭಿಸಿದ್ದಾರೆ. ಜನಪ್ರತಿನಿಧಿಗಳು ಸಹ ಯೋಜನೆ ವಿರುದ್ಧ ಧ್ವನಿ ಎತ್ತಿದ್ದಾರೆ.
ಯೋಜನೆ ಜಾರಿಯಾದಲ್ಲಿ ಜಿಲ್ಲೆಯ 190 ಹಳ್ಳಿಗಳು ತೊಂದರೆಗೆ ಸಿಲುಕಲಿವೆ. ಈ ನದಿಗಳ ನೀರಿನಿಂದ ಕೃಷಿ ನಡೆಸುತ್ತಿರುವವರು ನೀರಿಲ್ಲದೇ ಅತಂತ್ರರಾಗಬೇಕಾದೀತು. ಒಂದು ಸಾವಿರ ಏಕರೆ ಅರಣ್ಯ ಪ್ರದೇಶ, ನೀರು ಕಾಲುವೆ, ರಸ್ತೆ, ವಿದ್ಯುತ್ ಮಾರ್ಗ ಹಾನಿಗೊಳಗಾಗಲಿದೆ.
ಒಂದಲ್ಲ ಒಂದು ಯೋಜನೆ ಬಂದು ಇಲ್ಲಿನ ಜನತೆ ನಿತ್ಯದ ಬದುಕನ್ನೇ ಬಿಟ್ಟು ಅಸ್ತಿತ್ವ ಕಾಪಾಡಿಕೊಳ್ಳಲು ಹೋರಾಟ ನಡೆಸುವುದೇ ಕಾಯಕವಾಗಿದೆ. ಈ ಯೋಜನೆಯ ವಿರುದ್ಧ ಯಲ್ಲಾಪುರ, ಶಿರಸಿ, ಸಿದ್ದಾಪುರಗಳಲ್ಲಿ ತೀವ್ರ ಹೋರಾಟ ಸಭೆಗಳು ನಡೆದಿವೆ.ಬೇಡ್ತಿ ಯೋಜನೆ ರೂಪುಗೊಳ್ಳುವ ತಟದಲ್ಲಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಬೃಹತ್ ಆಂದೋಲನ ನಡೆಸಲಾಯಿತು. ಜನವರಿಯಲ್ಲಿ ಶಿರಸಿಯಲ್ಲಿ ಬೃಹತ್ ಆಂದೋಲನ ನಡೆಸಲಾಯಿತು. ಹೀಗೆ ನಿತ್ಯ ಈ ಜಿಲ್ಲೆಯ ಜನ ಭವಿಷ್ಯತ್ತಿನ ಬದುಕಿಗಾಗಿ ಹೋರಾಡುತ್ತಲೇ ಬಂದಿದ್ದಾರೆ.
ಈಚೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯಕ, ಪರಿಸರವಾದಿ ಅನಂತ ಹೆಗಡೆ ಅಶೀಸರ, ಕೇಂದ್ರ ಪರಿಸರ ಸಚಿವರನ್ನು ಭೇಟಿ ಮಾಡಿ ಈ ಯೋಜನೆಯಿಂದಾಗುವ ಅಪಾರ ಹಾನಿಯ ಕುರಿತು ಮನವರಿಕೆ ಮಾಡಿದ್ದಾರೆ. ಆದರೆ, ಯೋಜನೆಯ ಬಗ್ಗೆ ಜನತೆ ತೀವ್ರ ಚಿಂತಿತರಾಗಿದ್ದು, ನಿರಂತರ ಹೋರಾಟ ನಡೆಸುವ ಸಂಕಲ್ಪ ಮಾಡಿದ್ದಾರೆ. ಬೇಡ್ತಿ ವರದಾ ನದಿ ಜೋಡಣೆಯಿಂದ ಇಲ್ಲಿನ ಪರಿಸರ, ಕೃಷಿ ಮತ್ತು ಮೀನುಗಾರಿಕೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಎಲ್ಲ ವಿಜ್ಞಾನಿಗಳು ಒಕ್ಕೊರಲಿನಿಂದ ಹೇಳುತ್ತಿದ್ದಾರೆ. ಹಾಗಾಗಿ ಅತಾರ್ಕಿಕ ಮತ್ತು ಅವೈಜ್ಞಾನಿಕವಾದ ಈ ಯೋಜನೆಗಳನ್ನು ಈ ಹಂತದಲ್ಲಿಯೇ ಕೈಬಿಡಬೇಕು. ಯೋಜನೆಯ ವಿರುದ್ಧ ಹೋರಾಟವಂತೂ ನಡೆಯುತ್ತಿದೆ ಎನ್ನುತ್ತಾರೆ ಗಂಗಾಧರೇಂದ್ರ ಸರಸ್ವತಿ ಶ್ರೀಗಳು.