ಬೇಡ್ತಿ-ವರದಾ ನದಿ ಜೋಡಣೆ ಡಿಪಿಆರ್‌ ಅವಿವೇಕದ ನಿರ್ಧಾರ: ಕಾಗೇರಿ

KannadaprabhaNewsNetwork |  
Published : Dec 28, 2025, 03:15 AM IST
keos | Kannada Prabha

ಸಾರಾಂಶ

ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಅತ್ಯಂತ ಖೇದಕರ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶಿರಸಿ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಮತ್ತು ಜಿಲ್ಲೆಯ ಜೀವನಾಡಿಗಳ ಮೇಲೆ ನೇರ ಪರಿಣಾಮ ಬೀರುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಅತ್ಯಂತ ಖೇದಕರ ಮತ್ತು ಅವಿವೇಕದ ನಿರ್ಧಾರವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ನಡೆದ ಚರ್ಚೆಯಂತೆ, ಈ ಯೋಜನೆ ಮುಂದುವರಿಸಲು ರಾಜ್ಯ ಜಲಸಂಪನ್ಮೂಲ ಇಲಾಖೆ ಸಚಿವ ಡಿ.ಕೆ. ಶಿವಕುಮಾರ ತೋರುತ್ತಿರುವ ಉತ್ಸಾಹ ಜಿಲ್ಲೆಯ ಜನತೆಗೆ ಎಸಗುತ್ತಿರುವ ಘೋರ ದ್ರೋಹವಾಗಿದೆ. ನದಿ ಜೋಡಣೆ ಯೋಜನೆಗೆ ರಾಜ್ಯ ಸರ್ಕಾರವೇ ಪೂರ್ಣ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ ಎಂಬ ಸ್ಪಷ್ಟ ನಿಯಮವಿದ್ದರೂ, ಜನಜೀವನ ಮತ್ತು ಇಡೀ ಪರಿಸರವನ್ನು ನಾಶ ಮಾಡುವ ಈ ಯೋಜನೆ ಕಾರ್ಯಸಾಧುವಲ್ಲ ಎಂದು ತಿರಸ್ಕರಿಸುವ ಬದಲು ರಾಜ್ಯ ಸರ್ಕಾರವು ಇದಕ್ಕೆ ಮನ್ನಣೆ ನೀಡುತ್ತಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಈ ಯೋಜನೆ ಕುರಿತಂತೆ ಕೆಲವರು ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿಯನ್ನು ಹಾಕುತ್ತಿರುವುದು ಸ್ಪಷ್ಟ ರಾಜಕೀಯ ಉದ್ದೇಶ ಇದರಲ್ಲಿ ಕಾಣಿಸುತ್ತದೆ. ವಾಸ್ತವದಲ್ಲಿ, ಕೇವಲ ಕೇಂದ್ರ ಸರ್ಕಾರ ನೀಡುವ ಜಲ ಸಂಪನ್ಮೂಲ ಯೋಜನೆಯ ಅನುದಾನದ ಆಸೆಗಾಗಿ ಅಮೂಲ್ಯ ಕೃಷಿಯ ಬದುಕನ್ನು ಮತ್ತು ಅರಣ್ಯ ಸಂಪತ್ತನ್ನು ಬಲಿಗೊಡಲು ಹೊರಟಿರುವುದು ಅಕ್ಷಮ್ಯ ಅಪರಾಧವಾಗಿದೆ.​ ನಮ್ಮ ಭಾಗಕ್ಕೆ ನೈಸರ್ಗಿಕವಾಗಿ ಬೀಳುವ ಮಳೆಯಿಂದಲೇ ಇಲ್ಲಿನ ರೈತರು ಹಾಗೂ ಪರಿಸರ ಬದುಕುತ್ತಿದ್ದು, ಬೇಸಿಗೆಯ ಅವಧಿಯಲ್ಲಿ ಈ ಭಾಗದಲ್ಲಿಯೇ ತೀವ್ರ ನೀರಿನ ಕೊರತೆ ಇರುತ್ತದೆ. ಇಲ್ಲಿನ ಜನರಿಗೆ ನೀರಿನ ಅವಶ್ಯಕತೆ ತೀರಾ ಇರುವಾಗ, ಇಲ್ಲಿಂದ ನೀರನ್ನು ತೆಗೆದುಕೊಂಡು ಹೋಗಿ ವರದಾ ನದಿಗೆ ಸೇರಿಸುವುದು ಒಂದು ಅವೈಜ್ಞಾನಿಕ ಯೋಜನೆಯಾಗಿದ್ದು, ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಈ ತರದ ಯೋಜನೆಗಳ ನಿದರ್ಶನಗಳು ನಮ್ಮ ಕಣ್ಣು ಮುಂದೆಯೇ ಇದೆ. ಈಗಾಗಲೇ ವಿವಿಧ ಬೃಹತ್ ಯೋಜನೆಗಳಿಂದ ಪಶ್ಚಿಮ ಘಟ್ಟದ ಪರಿಸರ ತತ್ತರಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ಬೇಡ್ತಿ-ವರದಾ ಜೋಡಣೆಯಂತಹ ಯೋಜನೆಗಳು ಸಹ್ಯಾದ್ರಿಯ ಉಳಿವಿಗೆ ಅಂತಿಮ ಕೊಡಲಿ ಪೆಟ್ಟು ನೀಡಲಿವೆ. ನಾವು ಈಗಾಗಲೇ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ, ಈ ಯೋಜನೆಯಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿ ಮರುಪರಿಶೀಲನೆಗೆ ವಿನಂತಿಸಿದ್ದೇವೆ.

ಶ್ರೀ ಸ್ವರ್ಣವಲ್ಲಿಯ ಶ್ರೀಮದ್ ಶ್ರಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಶ್ಚಿಮ ಘಟ್ಟಗಳ ಸಂರಕ್ಷಣಾ ಸಮಾವೇಶಗಳ ಮೂಲಕ ನಾವು ಈ ನದಿ ತಿರುವು ಯೋಜನೆಯ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ. ಈ ಯೋಜನೆಯನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಇದು ಯಾವುದೇ ಕಾರಣಕ್ಕೂ ಜಾರಿಗೆ ಬರದಂತೆ ತಡೆಯಲು ಅಗತ್ಯವಾದ ಎಲ್ಲ ವಿಧದ ಪ್ರಯತ್ನ ಹಾಗೂ ಕಾನೂನಾತ್ಮಕ ಮತ್ತು ಜನಪರ ಹೋರಾಟಗಳನ್ನು ಸಂಘಟಿತವಾಗಿ ಮಾಡುತ್ತೇವೆ. ​ನಮ್ಮ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಬಲಿಗೊಟ್ಟು ಪಡೆಯುವ ಯಾವುದೇ "ಅಭಿವೃದ್ಧಿ " ನಮಗೆ ಬೇಕಿಲ್ಲ. ರಾಜಕೀಯ ಲಾಭಕ್ಕಾಗಿ ಈ ಜನವಿರೋಧಿ ಯೋಜನೆಯನ್ನು ಮುಂದುವರಿಸಿದರೆ ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಜಿಲ್ಲೆಯ ಹಿತರಕ್ಷಣೆಗಾಗಿ ಮತ್ತು ಸಹ್ಯಾದ್ರಿಯ ಉಳಿವಿಗಾಗಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೌರ್ಜನ್ಯಕ್ಕೆ ಒಳಗಾದ ಕುಟುಂಬದೊಂದಿಗೆ ಸರ್ಕಾರ: ಸಚಿವ ಲಾಡ್‌
ತಳವರ್ಗದವರ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಿಸಿ: ಕುರುವ ಮಂಜುನಾಥ್