ಕನ್ನಡಪ್ರಭ ವಾರ್ತೆ ಮಡಿಕೇರಿ ಜೇನುಕುರುಬರ ಮನೆತನದ ಕಕ್ಕೇರಿ ಕುಟುಂಬಸ್ಥರು ತಿತಿಮತಿ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ 5 ದಿನ ದಿನಗಳ ಕ್ರೀಡೋತ್ಸವಕ್ಕೆ ಸಂಭ್ರಮದ ತೆರೆ ಕಂಡಿದೆ. ಜೇನು ಕುರುಬ ಯುವಕರ ಅಭಿವೃದ್ಧಿ ಸಂಘ ನೇತೃತ್ವದಲ್ಲಿ ಆಯೋಜಿಸಿದ 5ನೇ ವರ್ಷದ ಕ್ರೀಡೋತ್ಸವದಲ್ಲಿ ಕ್ರಿಕೆಟ್ ಪಂದ್ಯಾವಳಿ, ಹಗ್ಗ ಜಗ್ಗಾಟ, ಕಪ್ಪೆ ಜಿಗಿತ, ಮ್ಯೂಸಿಕಲ್ ಚೇರ್ ಸೇರಿದಂತೆ ಮಹಿಳೆಯರು, ಪುರುಷರು, ಮಕ್ಕಳಿಗೆ ಹಲವಾರು ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದಿವಾಸಿಗಳು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಗಮನಸೆಳೆದರು. ಮೈಸೂರು ಜಿಲ್ಲಾ ಜೇನುಕರುಬರ ಸಂಘದ ಅಧ್ಯಕ್ಷ ಜಿ.ಟಿ. ರಾಜಪ್ಪ ಮಾತನಾಡಿ, ಜೇನು ಕುರುಬ ಸಮುದಾಯದ ಬಾಂಧವರು ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಸಿದ್ದು ತಮ್ಮದೇ ಆದ ವೃತ್ತಿ ಜೀವನದೊಂದಿಗೆ ಮುನ್ನಡೆಯುತ್ತಿದ್ದಾರೆ. ಹಲವು ವರ್ಷಗಳಿಂದಲೂ ಕಾಡಂಚಿನಲ್ಲಿ ಮೂಲಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿರುವ ಜೇನು ಕುರುಬರನ್ನ ಸರ್ಕಾರ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ ಎಂದರು. ಆದಿವಾಸಿ ಮಕ್ಕಳು ಶಿಕ್ಷಣ ಹಾಗೂ ಕ್ರೀಡೆ ಸೇರಿದಂತೆ ಹಲವಾರು ಸಾಧನೆ ಮೂಲಕ ಗುರುತಿಸಿಕೊಂಡಿದ್ದರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಸಿಗದಂತಾಗಿದೆ. ಆದಿವಾಸಿ ಮಕ್ಕಳ ಸಾಧನೆಯನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಪರಿಗಣಿಸಿ ಉತ್ತಮ ಭವಿಷ್ಯ ರೂಪಿಸಬೇಕೆಂದು ಮನವಿ ಮಾಡಿದರು. ಮುಖಂಡ ಜೆ.ಕೆ ಅಪ್ಪಾಜಿ ಮಾತನಾಡಿ, ಜೇನು ಕುರುಬ ಮನೆತನದ ಕುಟುಂಬಗಳು ಒಗ್ಗೂಡಿ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸುವುದರ ಮೂಲಕ ಯುವ ಸಮೂಹಕ್ಕೆ ಉತ್ತೇಜನ ನೀಡುತ್ತಿದ್ದು ಇದರಿಂದ ಕ್ರೀಡಾ ಮನೋಭಾವದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡುವುದರ ಮೂಲಕ ಆದಿವಾಸಿಗಳು ಅಭಿವೃದ್ಧಿಯೊಂದಿಗೆ ಮುನ್ನಡೆಯಲು ಸಹಕಾರ ನೀಡಬೇಕೆಂದರು. ಜೇನು ಕುರುಬ ಯುವಕರ ಅಭಿವೃದ್ದಿ ಸಂಘದ ಅಧ್ಯಕ್ಷ ಜೆ.ಬಿ ಸತೀಶ್ ಮಾತನಾಡಿ 5ನೇ ವರ್ಷದ ಅಂಗವಾಗಿ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು. ಕ್ರಿಕೆಟ್ ಪಂದ್ಯಾಟದಲ್ಲಿ ಸುಮಾರು 50 ತಂಡಗಳು ಭಾಗವಹಿಸಿವೆ. ಪುರುಷರು ಮಹಿಳೆಯರು ಮಕ್ಕಳಿಗೆ ಹಲವಾರು ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ ಎಂದರು. ಸಮಾರೋಪ ಸಮಾರಂಭದಲ್ಲಿ ನಾಣಚೆ ಗದ್ದೆ ಹಾಡಿಯ ರಮೇಶ್ ಕಲಾತಂಡದವರಿಂದ ಆದಿವಾಸಿ ಸಂಸ್ಕೃತಿಯ ಸಂಗೀತ ಕಾರ್ಯಕ್ರಮಗಳು ಗಮನ ಸೆಳೆಯಿತು. ತಗಡಿನ ಟಿನ್ನು, ಪ್ಲಾಸ್ಟಿಕ್ ಡ್ರಮ್ಮು ಬಾರಿಸಿ ನೃತ್ಯ ಸಂಗೀತಕ್ಕೆ ಆದಿವಾಸಿ ಯುವ ಸಮೂಹ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು ಕರ್ನಾಟಕ ಕುರುಬರ ಸಂಘದ ರಾಜ್ಯ ಅಧ್ಯಕ್ಷೆ ಪ್ರಭಾವತಿ, ಮೈಸೂರು ಜಿಲ್ಲಾ ಜೇನು ಕುರುಬರ ಸಂಘದ ಉಪಾಧ್ಯಕ್ಷ ಬಸವಣ್ಣ, ಜಿಲ್ಲಾ ಕಾರ್ಯದರ್ಶಿ ಚಂದ್ರು, ತಾಲೂಕು ಅಧ್ಯಕ್ಷ ಸಿದ್ದು, ಉಪಾಧ್ಯಕ್ಷ ಬಸವಣ್ಣ, ಜೇನು ಕುರುಬ ಯುವಕರ ಅಭಿವೃದ್ದಿ ಸಂಘದ ಉಪಾಧ್ಯಕ್ಷ ಮನು, ಕಾರ್ಯದರ್ಶಿ ಜೆ ಟಿ ಅಯ್ಯಪ್ಪ, ಖಜಾಂಜಿ ಶಿವು,ಗ್ರಾ ಪಂ ಸದಸ್ಯರಾದ ಅಪ್ಪಣ್ಣ,ಅಪ್ರೊಜ್ , ಕಕ್ಕೇರಿ ಜೇನು ಕುರುಬ ಮನೆತನದ ರಮೇಶ್, ಕುಮಾರ್, ಅಜೇಯ್, ನಿತಿನ್, ಅದಿವಾಸಿ ಮುಖಂಡರಾದ ಹರೀಶ್, ಮೋಹನ್ ಪೂಜಾರಿ, ಶ್ಯಾಮ್,ಅಪ್ಪಣ್ಣ ಸೇರಿದಂತೆ ಮತ್ತಿತರರು ಇದ್ದರು.