ಮರಳುಗಾರಿಕೆ ನಡೆಯದೆ ಸಂಕಷ್ಟ: 10 ದಿನಗಳ ಗಡುವು

KannadaprabhaNewsNetwork |  
Published : Oct 27, 2023, 12:30 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ವಿವಿಧ ಸಂಘಟನೆಗಳ ಮುಖಂಡರು. | Kannada Prabha

ಸಾರಾಂಶ

ಮರಳುಗಾರಿಕೆ ನಡೆಯದೆ ಸಂಕಷ್ಟ; ಹತ್ತು ದಿನಗಳ ಗಡುವು

ಕನ್ನಡಪ್ರಭ ವಾರ್ತೆ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಸಂಪೂರ್ಣ ನಿಂತಿದ್ದು, ಕಟ್ಟಡ ನಿರ್ಮಾಣ ಕೆಲಸಗಳು ನಡೆಯದೆ ಅಭಿವೃದ್ಧಿಗೆ ಹೊಡೆತ ಬಿದ್ದಿದೆ. ಇನ್ನು 10 ದಿನಗಳಲ್ಲಿ ಮರಳು ಅಭಾವ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ನಿರ್ಮಾಣ ಕೆಲಸ ಸ್ಥಗಿತಗೊಳಿಸಿ ಕಾರ್ಮಿಕರೊಂದಿಗೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ನಿರ್ಮಾಣ ಕ್ಷೇತ್ರದ ವಿವಿಧ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಸಿವಿಲ್‌ ಕಾಂಟ್ರಾಕ್ಟರ್ಸ್‌ ಎಸೋಸಿಯೇಶನ್‌, ಸಿವಿಲ್‌ ಎಂಜಿನಿಯರ್ಸ್‌ ಎಸೋಸಿಯೇಶನ್‌, ಸಿಮೆಂಟ್‌ ಎಸೋಸಿಯೇಶನ್‌ ಹಾಗೂ ಕ್ರೆಡೈ ಸಂಘಟನೆಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿವಿಲ್‌ ಕಾಂಟ್ರಾಕ್ಟರ್ಸ್‌ ಎಸೋಸಿಯೇಶನ್‌ ಅಧ್ಯಕ್ಷ ಮಹಾಬಲ ಕೊಟ್ಟಾರಿ, ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮಳೆಗಾಲ ಮುಗಿದು ಇಷ್ಟು ಸಮಯ ಆದರೂ ಇನ್ನೂ ಮರಳು ಎತ್ತಲು ಪರ್ಮಿಷನ್ ನೀಡಿಲ್ಲ. ಬೆಂಗಳೂರಿನಲ್ಲಿ ಅಧಿಕಾರಿಗಳ ಪ್ರಕ್ರಿಯೆ ವಿಳಂಬವಾಗುತ್ತಿದೆ. ಸಿಎಂ, ಉಸ್ತುವಾರಿ ಸಚಿವರಿಗೆ ಮನವಿ ನೀಡಿದರೂ ಕ್ರಮ ಆಗಿಲ್ಲ. ಇನ್ನು ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಜೂನ್‌ ತಿಂಗಳಲ್ಲೇ ಟೆಂಡರ್ ಆಗಿದ್ದರೂ ವೇಯ್ ಬ್ರಿಜ್‌ ಮಾಡಿಲ್ಲ ಎಂಬ ಕಾರಣಕ್ಕೆ ಮರಳೆತ್ತಲು ಪರ್ಮಿಟ್‌ ನೀಡುತ್ತಿಲ್ಲ. ಹೀಗಾಗಿ ಮರಳೇ ಇಲ್ಲವಾಗಿದೆ ಎಂದು ಹೇಳಿದರು. 21 ಸಾವಿರ ರು.ಗೆ ಮರಳು!: ಜಿಲ್ಲೆಯಲ್ಲಿ ಯಾವುದೇ ಮರಳು ಲಭ್ಯವಿಲ್ಲ. ಇನ್ನೊಂದೆಡೆ ಇದನ್ನೇ ಅವಕಾಶವಾಗಿಸಿ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮರಳು ಮಾರಾಟ ನಡೆಯುತ್ತಿದೆ, ಮೂರು ಯುನಿಟ್ ಮರಳು 21 ಸಾವಿರ ರು.ಗೆ ಏರಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಕಾಮಗಾರಿಗಳನ್ನೂ ನಿಲ್ಲಿಸುವ ಪರಿಸ್ಥಿತಿ ತಲಪುತ್ತಿದ್ದೇವೆ ಎಂದು ಸಮಸ್ಯೆ ಹೇಳಿಕೊಂಡರು. ಗುಣಮಟ್ಟದ ಕಾಮಗಾರಿಗೆ ತೊಂದರೆ: ಕ್ರೆಡೈ ಅಧ್ಯಕ್ಷ ವಿನೋದ್‌ ಪಿಂಟೊ ಅವರು ಮಾತನಾಡಿ, ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಜಿಲ್ಲಾಧಿಕಾರಿ ಮಟ್ಟದಲ್ಲಿ ಸಭೆ ನಡೆದು ಅನುಮೋದನೆಗೆ ಬೆಂಗಳೂರಿಗೆ ಕಳುಹಿಸಿದ್ದಾರೆ. ಅಲ್ಲಿ ಪ್ರಕ್ರಿಯೆ ನಿಧಾನವಾಗುತ್ತಿದೆ. ಸಾಮಾನ್ಯವಾಗಿ ಸಿಆರ್‌ಝಡ್‌ ವ್ಯಾಪ್ತಿಯ ಮರಳು ಉತ್ಕೃಷ್ಟ ದರ್ಜೆಯದ್ದಾಗಿರುತ್ತದೆ. ಗುಣಮಟ್ಟದ ಕಾಮಗಾರಿ ನಡೆಸಲು ಇಂಥ ಮರಳಿಗೆ ಬೇಡಿಕೆ ಹೆಚ್ಚಿದೆ ಎಂದು ತಿಳಿಸಿದರು. ಸಿವಿಲ್‌ ಎಂಜಿನಿಯ​ರ್ಸ್ ಅಸೋಸಿಯೇಶನ್‌ನ ವಿಜಯ ವಿಷ್ಣು ಮಯ್ಯ, ಸಿಮೆಂಟ್‌ ಅಸೋಸಿಯೇಶನ್‌ನ ಪುರುಷೋತ್ತಮ ಶೆಣೈ, ಕೆನರಾ ಎಂಜಿನಿಯ​ರ್ಸ್ ಎಸೋಸಿಯೇಶನ್‌ನ ಬಾಲಸುಬ್ರಹ್ಮಣ್ಯ, ಏಕನಾಥ ದಂಡೆಕೇರಿ ಮತ್ತಿತರರು ಇದ್ದರು. ಮುಂದೆ ನಡೆಸುವ ಪ್ರತಿಭಟನೆಗೆ ಸಿವಿಲ್‌ ಎಂಜಿನಿಯ​ರ್ಸ್ ಎಸೋಸಿಯೇಶನ್‌, ಕೆನರಾ ಬಿಲ್ಡ​ರ್ಸ್ ಎಸೋಸಿಯೇಶನ್‌, ಕ್ರೆಡೈ, ಸಿಮೆಂಟ್‌ ಸ್ಟೀಲ್‌ ಡೀಲ​ರ್ಸ್ ಎಸೋಸಿಯೇಶನ್‌, ಪಿಡಬ್ಯ್ಲೂಡಿ ಕಾಂಟ್ರಾಕ್ಟ​ರ್ಸ್ ಎಸೋಸಿಯೇಶನ್‌, ಪೈಂಟ್‌ ಹಾರ್ಡ್‌ವೇರ್‌ ಡೀಲರ್‌ ಎಸೋಸಿಯೇಶನ್‌, ಮನಪಾ ಕಾಂಟ್ರಾಕ್ಟರ್‌ ಎಸೋಸಿಯೇಶನ್‌ ಬೆಂಬಲ ಘೋಷಿಸಿವೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ