ಹೊಸದುರ್ಗ: ರಂಗಭೂಮಿಯ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಸಾಣೇಹಳ್ಳಿಯ ಶಿವಕುಮಾರ ಕಲಾಸಂಘ ನ.2ರಿಂದ 8ರವರಗೆ ಸಾಣೇಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದರು. ಗುರುವಾರ ಮಠದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಗನದಿಂದ ಮೇಲೆ ಅನುಭಾವ ತಾನಿಲ್ಲ ಎಂಬ ವೇದವಾಕ್ಯದೊಂದಿಗೆ ಈ ವರ್ಷ ನಾಟಕೋತ್ಸವ ನಡೆಯಲಿದ್ದು, ಪ್ರತಿವರ್ಷದಂತೆ ಈ ವರ್ಷವೂ ಶಿವಸಂಚಾರ-23ರ 3 ನಾಟಕಗಳ ಜೊತೆಗೆ ಅನ್ಯ ಭಾಷೆಯ ನಾಟಕಗಳೂ ಸೇರಿದಂತೆ ಒಟ್ಟು 12 ನಾಟಕಗಳು ಪ್ರದರ್ಶನಗೊಳ್ಳುವವು. ರಾತ್ರಿ ನಡೆಯುವ 7 ನಾಟಕಗಳು ಮುಖ್ಯ ವೇದಿಕೆಯಲ್ಲಿ ಮಧ್ಯಾಹ್ನ ನಡೆಯುವ 5 ನಾಟಕಗಳು ಎಸ್.ಎಸ್.ಒಳಾಂಗಣ ರಂಗಮಂದಿರದಲ್ಲಿ ನಡೆಯುವವು ಎಂದು ಸ್ವಾಮೀಜಿ ತಿಳಿಸಿದರು. ನ.2ರಂದು ಪ್ರಾರಂಭಗೊಳ್ಳಲಿರುವ ನಾಟಕೋತ್ಸವವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಶಿವಸಂಚಾರ ನಾಟಕಗಳನ್ನು ಹಾಗೂ ಬೆಂಗಳೂರಿನ ಕವಿ ಚಿಂತಕ ಜಯಂತ್ ಕಾಯ್ಕಿಣಿ ಕನ್ನಡ ರಾಜ್ಯೋತ್ಸವ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ದಾವಣಗೆರೆ ಸಂಸದ ಎಂ.ಸಿದ್ದೇಶ್ವರ್, ಶಾಸಕರಾದ ಕೆ.ಎಸ್.ಬಸವಂತಪ್ಪ, ದೇವೇಂದ್ರಪ್ಪ ಮಾಜಿ ಸಚಿವ ಬಿಸಿ ಪಾಟೀಲ್, ಮಾಜಿ ಶಾಸಕರುಗಳಾದ ಬೆಳ್ಳಿ ಪ್ರಕಾಶ್, ಚಂದ್ರ ಶೇಖರಪ್ಪ, ನಟ ಡಾಲಿ ಧನಂಜಯ್ ಭಾಗವಹಿಸಲಿದ್ದಾರೆ. ನಾಟಕೋತ್ಸವದ ಕೊನೆಯ ದಿನ ರಂಗಭೂಮಿಯಲ್ಲಿನ ಜೀವಮಾನದ ಸಾಧನೆಗಾಗಿ ಕೊಡಮಾಡುವ ಶ್ರೀ ಶಿವಕುಮಾರ ಪ್ರಶಸ್ತಿಯನ್ನು ಬೆಂಗಳೂರಿನ ಕಲಾ ನಿರ್ದೇಶಕ ಶಶಿಧರ ಅಡಪ ಅವರಿಗೆ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಎಂ.ಬಿ.ಪಾಟೀಲ್, ಎಸ್. ಎಸ್.ಮಲ್ಲಿಕಾರ್ಜುನ್, ಶಾಸಕ ಬಿಜಿ.ಗೋವಿಂದಪ್ಪ, ರುದ್ರೇಗೌಡ್ರು, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ಸಂಘಟಕ ಶ್ರೀನಿವಾಸ ಐ.ಕಪ್ಪಣ್ಣ ಭಾಗವಹಿಸುವರು. ಒಂದು ದಿನ ಕಾಯಕ ಮತ್ತು ದಾಸೋಹ ತತ್ವಗಳ ಅಂತರ್ ಸಂಬಂಧ ಕುರಿತಂತೆ ವಿಚಾರ ಸಂಕೀರಣವಿರುವುದು. ಇದರಲ್ಲಿ ವಿಷಯ ಚಿಂತಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸುವರು. ಶಿವಸಂಚಾರದ ಬೆಳ್ಳಿ ಮಹೋತ್ಸವ ನಿಮಿತ್ತ ಸ್ಮರಣ ಸಂಚಿಕೆಯೂ ಸೇರಿದಂತೆ ಕೆಲ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ನಾಟಕೋತ್ಸವದಲ್ಲಿ ಪ್ರತಿವರ್ಷದಂತೆ ಧಾರ್ಮಿಕ ಮುಖಂಡರು, ರಾಜಕೀಯ ನೇತಾರರು, ಚಿಂತಕರು, ಕಲಾವಿದರು, ವಿಜ್ಞಾನಿಗಳು, ಮೊದಲಾದ ಗಣ್ಯರು, ಸಾಧಕರು ಭಾಗವಹಿಸುವರು. ನಾಟಕೋತ್ಸವದ ಆರಂಭದಿಂದ ಹಿಡಿದು ಮುಕ್ತಾಯದವರೆಗೆ ಕೃಷಿಗೆ ಸಂಬಂಧಿಸಿದಂತೆ ವಸ್ತು ಪ್ರದರ್ಶನವನ್ನು ಆಯೋಜಿಸಲಾಗುವುದು. ಪ್ರತಿವರ್ಷದಂತೆ ಪ್ರೇಕ್ಷಕರಿಗೆ ಪ್ರಸಾದದ ವ್ಯವಸ್ಥೆ ಇರುವುದು. ಖಾದಿ ಬಟ್ಟೆಗಳ ಮತ್ತು ಪುಸ್ತಕ ಮಳಿಗೆಗಳು ಇರುವವು. ಮಳೆ ಬಂದರೆ, ದಟ್ಟಣೆಯುಂಟಾಗದಂತೆ ಬೃಹತ್ ಎಲ್‌ಇಡಿ ಪರದೆಗಳ ವ್ಯವಸ್ಥೆಯನ್ನು ಮಾಡಲಾಗುವುದು. ಪ್ರತಿದಿನ ಬೆಳಗ್ಗೆ ನಡೆಯುವ ಪ್ರಾರ್ಥನಾ ಸಭೆಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಸಿದಂತೆ ವಿಷಯಗಳನ್ನು ಸಂಯೋಜಿಸಲಾಗುವುದು. ಇದರಲ್ಲಿ ಸುತ್ತಮುತ್ತಲಿನ ಶಾಲೆಯ ಮಕ್ಕಳಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ನಾಟಕೋತ್ಸವ ಯಶಸ್ವಿಗೊಳಿಸಲು ಸ್ವಾಗತ ಸಮಿತಿ, ಆರ್ಥಿಕ ಸಮಿತಿ, ಸ್ವಚ್ಛತಾ ಸಮಿತಿ, ಪ್ರಸಾದ ಸಮಿತಿ, ಪ್ರಚಾರ ಸಮಿತಿ ಮೊದಲಾದ ಸಮಿತಿಗಳನ್ನು ರಚಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು. ----- 26ಎಚ್‌ಎಸ್‌ಡಿ1 ಸಾಣೇಹಳ್ಳೀಯಲ್ಲಿ ನಾಟಕೋತ್ಸವದ ಅಂಗವಾಗಿ ಪಂಡಿತಾರಾಧ್ಯ ಸ್ವಾಮೀಜಿಗಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ------ ಇಷ್ಟಲಿಂಗ ದೀಕ್ಷೆ ಸ್ವೀಕಾರಕ್ಕೆ ಅವಕಾಶ ಜಗತ್ತಿನ ಹಲವಾರು ತಲ್ಲಣಗಳ ನಡುವೆ ಮನುಕುಲಕ್ಕೆ ಮಾನಸಿಕ ಸ್ಥೈರ್ಯ ನೀಡಲು ಹಾಗೂ ಬದುಕಿನಲ್ಲಿ ಭರವಸೆ ಮೂಡಿಸಲು ಕಲೆ, ಸಾಹಿತ್ಯ, ಸಂಗೀತ ಸಹಕಾರಿ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು. ಸಾಣೇಹಳ್ಳಿಯ ಮಠದಲ್ಲಿ ಗುರುವಾರ ನಾಟಕೋತ್ಸವದ ನಿಮಿತ್ತ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕೃಷಿಗೆ ಆರ್ಥಿಕತೆಗೆ ಬರಗಾಲವಿದೆ. ಇಂತಹ ಬರಗಾಲದ ಸಂದರ್ಭದಲ್ಲಿಯೂ ಅದ್ಧೂರಿಯಾಗಿ ನಾಟಕೋತ್ಸವ ನಡೆಯುತ್ತಿರುವುದೇ ಈ ಬಾರಿಯ ವಿಶೇಷ ಎಂದರು. ಪ್ರತಿವರ್ಷದಂತೆ ಈ ಬಾರಿ ಗಗನದಿಂದ ಮೇಲೆ ಅನುಭಾವ ತಾನಿಲ್ಲ ಎಂಬ ಘೋಷ ವಾಕ್ಯ ಹೊಂದಿದ್ದು, ಪುರಾಣ ಹೇಳುವವರು. ಪೌರೋಹಿತ್ಯ ಶಾಹಿಗಳು ಕೇವಲ ಭೂತ ಹಾಗೂ ಭವಿಷ್ಯತ್ತಿನ ಬಗ್ಗೆ ಹೇಳುತ್ತಾರೆ ಆದರೆ ಶರಣರು ಕೇವಲ ವರ್ತಮಾನದ ಬಗ್ಗೆ ಮಾತನಾಡಿದರು ಶರಣರ ಹಿತ ನುಡಿಯಂತೆ ವೇದ ಘೋಷ ಇಡಲಾಗಿದ್ದು, ಈ ಬಾರಿಯ ನಾಟಕೋತ್ಸವ ನಾಟಕಗಳು ವರ್ತಮಾನದ ಘಟನೆಗಳಿಗೆ ಸಂಬಂಧಿಸಿವೆ ಎಂದರು. ಚುನಾವಣೆ ಬಂದಾಗ ಉಚಿತ ಯೋಜನೆಗಳು ಹೆಚ್ಚು ಪ್ರಚಾರ ಪಡೆಯುತ್ತವೆ ಅವುಗಳಲ್ಲಿ ಕಾಯಕವು ಇಲ್ಲ ದಾಸೋಹವು ಇಲ್ಲ ಹಾಗಾಗಿ ಕಾಯಕ ಮತ್ತು ದಾಸೋಹದ ಬಗ್ಗೆ ಇರುವ ಸಮನ್ವಯತೆಯ ಬಗ್ಗೆ ವಿಚಾರ ಗೋಷ್ಠಿ ನಡೆಯಲಿದ್ದು ಸುಮಾರು 500ಕ್ಕೂ ಹೆಚ್ಚು ಶಿಕ್ಷಕರು ಭಾಗಿಯಾಗಲಿದ್ದಾರೆ ಎಂದರು. ----- 26ಎಚ್ ಎಸ್ ಡಿ1 ಬಯಲು ರಂಗ ಮಂದಿರ ------ 26 ಎಚ್ ಎಸ್ ಡಿ 2 ಪಂಡಿತಆರಾಧ್ಯ ಸ್ವಾಮೀಜಿ