ರಿಯಾಜಅಹ್ಮದ ಎಂ. ದೊಡ್ಡಮನಿ
ಕನ್ನಡಪ್ರಭ ವಾರ್ತೆ ಡಂಬಳಗ್ರಾಮಗಳಲ್ಲಿ ಅನಧಿಕೃತ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದ್ದು, ಮದ್ಯ ವ್ಯಸನಿಗಳು ನಶೆಯಲ್ಲಿ ರಸ್ತೆ ಬದಿಗಳಲ್ಲಿ ಬೀಳುವುದು ಸಾಮಾನ್ಯವಾಗಿದೆ.
ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಡಂಬಳ ಗ್ರಾಮದಲ್ಲಿ ಮದ್ಯ ಮಾರಾಟಗಾರರು ಪ್ರತಿ ಓಣಿಯಲ್ಲಿ ಹುಟ್ಟಿಕೊಂಡಿದ್ದಾರೆ. ಇದರಿಂದ ಈ ಭಾಗದ ಮಹಿಳೆಯರು ಹಾಗೂ ಸಾರ್ವಜನಿಕರು ರೋಸಿ ಹೋಗಿದ್ದಾರೆ.ಡಂಬಳ ಬಸ್ ನಿಲ್ದಾಣ, ಮುಖ್ಯ ಬಜಾರ್, ಜನತಾ ಪ್ಲಾಟ್, ಅಂಬೇಡ್ಕರ್ ಕಾಲನಿ, ಚವಡಿ, ಸ್ಮಶಾನಕ್ಕೆ ಹೋಗುವ ಮಾರ್ಗ, ಹೊಸ ಡಂಬಳ ಬಸ್ ನಿಲ್ದಾಣಗಳ ಹತ್ತಿರ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತದೆ. ಡಂಬಳ ಗ್ರಾಮದಲ್ಲಿ ಅಧಿಕೃತ ಮದ್ಯ ಮಾರಾಟ ಇಲ್ಲದಿದ್ದರೂ ಮುಂಡರಗಿಯ ಕೆಲ ಬಾರ್‌ಗಳಿಂದ ವಾಹನಗಳ ಮೂಲಕ ಮದ್ಯ ಸರಬರಾಜು ಆಗುತ್ತದೆ ಎನ್ನುತ್ತಾರೆ ಮದ್ಯ ವ್ಯಸನಿಗಳು. ಡಂಬಳ, ಹೊಸ ಡಂಬಳ, ಡೋಣಿ, ಕದಾಂಪುರ, ಪೇಠಾ ಆಲೂರ, ಮೇವುಂಡಿ, ಹಿರೇವಡ್ಡಟ್ಟಿ, ಹಾರೂಗೇರಿ, ಹಳ್ಳಿಗುಡಿ, ಹಳ್ಳಿಕೇರಿ, ವೆಂಕಟಾಪುರ, ಶಿವಾಜಿನಗರ, ಜಂತ್ಲಿ ಶಿರೂರು, ವೆಂಕಟಾಪುರ, ಮುರಡಿ ತಾಂಡಾ, ಚಿಕ್ಕವಡ್ಡಟ್ಟಿ, ಕೊರ್ಲಹಳ್ಳಿ, ಹಮ್ಮಿಗಿ, ಬಾಗವಾಡಿ, ಬಿಡನಾಳ, ಕಲಕೇರಿ, ಮುಂಡವಾಡ, ಬಿದರಳ್ಳಿ ಸೇರಿದಂತೆ ಪ್ರತಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಈ ಗ್ರಾಮಗಳ ಬಡ ಕುಟುಂಬದ ಮಹಿಳೆಯರ ಮಾಂಗಲ್ಯ ಹಾಗೂ ಕಿವಿಯೋಲೆ ಹಾಗೂ ಮನೆಯ ಸಾಮಾನುಗಳು, ದವಸ ಧಾನ್ಯಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಕೆಲ ಮದ್ಯ ವ್ಯಸನಿಗಳು ಸರ್ಕಾರ ನೀಡುತ್ತಿರುವ ಗೃಹ ಲಕ್ಷ್ಮಿ ಹಣ ನೀಡದಿದ್ದರೆ ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾರೆ. ಇನ್ನು ಕೆಲ ಮಹಿಳೆಯರು ಕುಡಕರಿಂದ ಬೇಸತ್ತು ತವರು ಮನೆ ಸೇರಿದ ಉದಾಹರಣೆಯೂ ಇದೆ.ಡಂಬಳ ಸೇರಿದಂತೆ ಹೋಬಳಿಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಹಲವಾರು ಕುಟುಂಬಗಳು ಬೀದಿ ಪಾಲಾಗಿವೆ. ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಬಕಾರಿ, ಪೊಲೀಸ್ ಇಲಾಖೆ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಡರಗಿ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ನಡೆದಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಮಾರಾಟ ತಡೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಮಾಡಲಾಗುವುದು ಹೋರಾಟಗಾರ ಗೋಣಿಬಸಪ್ಪ ಎಸ್. ಕೋರ್ಲಹಳ್ಳಿ ಹೇಳುತ್ತಾರೆ.ಈಗಾಗಲೇ ಮುಂಡರಗಿ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಪ್ರಕರಣ ದಾಖಲಿಸಿದ್ದು, ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ ಅಬಕಾರಿ ಅಧಿಕಾರಿ ಸುವರ್ಣಾ ಹೇಳಿದರು.