ಶಾಂತ ಮನೋಭಾವದ ಬ್ರಾಹ್ಮಣ ತಾಳ್ಮೆ ಪರೀಕ್ಷೆ ಬೇಡ

KannadaprabhaNewsNetwork | Published : Apr 24, 2025 11:47 PM

ಸಾರಾಂಶ

ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿ ಅವಮಾನ ಮಾಡಿರುವ ಕ್ರಮ ಖಂಡನೀಯ ಎಂದು ತಾಲೂಕು ಬ್ರಾಹ್ಮಣ ಸೇವಾ ಸಮಾಜದ ಅಧ್ಯಕ್ಷ ಆರ್. ಸತ್ಯನಾರಾಯಣ್ ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿ ಅವಮಾನ ಮಾಡಿರುವ ಕ್ರಮ ಖಂಡನೀಯ ಎಂದು ತಾಲೂಕು ಬ್ರಾಹ್ಮಣ ಸೇವಾ ಸಮಾಜದ ಅಧ್ಯಕ್ಷ ಆರ್. ಸತ್ಯನಾರಾಯಣ್ ಹೇಳಿದ್ದಾರೆ. ತಾಲೂಕು ಕಚೇರಿ ಆವರಣದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮಾಜ ಸರ್ವೇ ಜನಾಃ ಸುಖಿನೋ ಭವಂತು ಎಂದು ಬೇಡಿಕೊಳ್ಳುವ ಸಮುದಾಯ. ಯಾರನ್ನೂ ದೂಷಿಸದ, ಯಾರಿಗೂ ನೋವನ್ನುಂಟು ಮಾಡದ ಸಮುದಾಯ. ಎಂದೆಂದೂ ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಸಾರುವ ಸಮುದಾಯವಾಗಿದೆ. ಇಂತಹ ಶಾಂತ ಮನಸ್ಸಿನ ಸಮುದಾಯದ ಸಹನೆಯನ್ನು ಪರೀಕ್ಷಿಸುವುದು ಬೇಡ. ತಾವಾಯಿತು ತಮ್ಮ ಕರ್ತವ್ಯವಾಯಿತು ಎಂದು ವಿದ್ಯೆಯೇ ನಮ್ಮ ಆಸ್ತಿ ಎಂದು ಭಾವಿಸಿರುವ ಈ ಸಮುದಾಯಕ್ಕೆ ಪರೀಕ್ಷಾಧಿಕಾರಿಗಳು ಅವಮಾನ ಮಾಡಿರುವುದು ಖಂಡನೀಯ. ಇಂದು ವಿಜ್ಞಾನ ಮುಂದುವರೆದಿದೆ. ಪರೀಕ್ಷೆಯಲ್ಲಿ ಅಕ್ರಮ ಎಸಗುವ ಯಂತ್ರಗಳನ್ನು ಕಂಡುಹಿಡಿಯಲು ಸಾಕಷ್ಟು ತಂತ್ರಗಳಿವೆ. ಅವುಗಳನ್ನು ಬಳಸಿಕೊಂಡು ಅಕ್ರಮ ತಡೆಯಬೇಕು. ನಮ್ಮ ಹಿಂದೂಗಳ ಹೆಣ್ಣು ಮಕ್ಕಳಿಗೆ ತಾಳಿ, ಬಳೆ, ಓಲೆ ಸೇರಿದಂತೆ ಇನ್ನಿತರೆ ಆಭರಣಗಳು ಶೋಭೆ ತರುವ ವಸ್ತುಗಳಾಗಿವೆ. ಅಲ್ಲದೇ ಅವೆಲ್ಲಾ ಪವಿತ್ರವಾದ ಸಂಕೇತ ಎಂಬ ಭಾವನೆ ಇದೆ. ಆದರೆ ಅಂತಹ ಭಾವನೆಯನ್ನು ಹತ್ತಿಕ್ಕುವ ಪ್ರಯತ್ನವಾಗಿ ಆಭರಣಗಳು, ಜನಿವಾರ ಸೇರಿದಂತೆ ಇನ್ನಿತರೆ ವಸ್ತುಗಳನ್ನು ತೆಗೆಸುವುದು ಅವಮಾನ ಮಾಡಿದಂತೆ ಆಗುತ್ತದೆ. ಅದನ್ನು ತಪ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಆರ್.ಸತ್ಯನಾರಾಯಣ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇಂತಹ ಹೀತ ಕೃತ್ಯ ಆಗದಂತೆ ಕ್ರಮ ವಹಿಸಬೇಕು. ಹಾಗೂ ಈಗಾಗಲೇ ಅವಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರೇಡ್ 2 ತಹಸೀಲ್ದಾರ್ ಸುಮತಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಸೇವಾ ಸಮಾಜದ ಮಾಜಿ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್, ಕಾರ್ಯದರ್ಶಿ ರವಿಶಂಕರ್, ನಿರ್ದೇಶಕರಾದ ಬ್ಯಾಂಕ್ ಶ್ರೀನಿವಾಸ್, ಪ್ರಾಣೇಶ್, ಗಿರೀಶ್ ಕೆ.ಭಟ್, ಗುರುಪ್ರಸಾದ್, ಯೋಗಾನಂದ್, ಪ್ರೆಸ್ ಶ್ರೀನಿವಾಸ್, ಮುಖಂಡರಾದ ಲಕ್ಷ್ಮೀನಾರಾಯಣ್, ರಾಘವೇಂದ್ರ, ರಾಮಚಂದ್ರು, ಕೃಷ್ಣ ಚೈತನ್ಯ, ದೇವಾಂಗ ಸಮಾಜದ ಮುಖಂಡ ಬ್ಯಾಂಕ್ ಮೂಡಲಗಿರಯ್ಯ ಸೇರಿದಂತೆ ಇತರರು ಇದ್ದರು.

Share this article