ಮಗುವಿನ ಖಾಸಗಿ ಆಸ್ಪತ್ರೆ ಬಿಲ್‌ ಕಟ್ಟಲು ದೊಡ್ಡಮ್ಮನಿಂದ ಭಿಕ್ಷೆ!

KannadaprabhaNewsNetwork |  
Published : Sep 12, 2025, 12:06 AM IST
53 | Kannada Prabha

ಸಾರಾಂಶ

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಮಗುವಿನ ಚಿಕಿತ್ಸೆಗೆ ಹಣವಿಲ್ಲದೆ ಕುಟುಂಬಸ್ಥರು ಪರದಾಡಿದ್ದು, ಖಾಸಗಿ ಆಸ್ಪತ್ರೆಗೆ ಬಿಲ್ ಪಾವತಿಸಲು ಮಗುವಿನ ದೊಡ್ಡಮ್ಮ ಗ್ರಾಮಸ್ಥರ ಬಳಿ ಸೆರಗೊಡ್ಡಿ ಭಿಕ್ಷೆ ಬೇಡಿರುವ ಮನಕಲಕುವ ವಿದ್ರಾವಕ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡೆತಲೆ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಮಗುವಿನ ಚಿಕಿತ್ಸೆಗೆ ಹಣವಿಲ್ಲದೆ ಕುಟುಂಬಸ್ಥರು ಪರದಾಡಿದ್ದು, ಖಾಸಗಿ ಆಸ್ಪತ್ರೆಗೆ ಬಿಲ್ ಪಾವತಿಸಲು ಮಗುವಿನ ದೊಡ್ಡಮ್ಮ ಗ್ರಾಮಸ್ಥರ ಬಳಿ ಸೆರಗೊಡ್ಡಿ ಭಿಕ್ಷೆ ಬೇಡಿರುವ ಮನಕಲಕುವ ವಿದ್ರಾವಕ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡೆತಲೆ ಗ್ರಾಮದಲ್ಲಿ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡ ಹೆಡತಲೆ ಗ್ರಾಮದ ಮಹೇಶ್ ಮತ್ತು ರಾಣಿ ದಂಪತಿಯ ಐದು ವರ್ಷದ ಮಗಳು ಆದ್ಯಾಳ ಚಿಕಿತ್ಸೆಗಾಗಿ ಆಕೆಯ ದೊಡ್ಡಮ್ಮ ಮಂಗಳಮ್ಮ ಎಂಬುವವರು ಭಿಕ್ಷೆ ಬೇಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಗ್ರಾಮಸ್ಥರೂ ಕೂಡ ಉದಾರವಾಗಿ ಸಹಾಯ ಹಸ್ತ ಚಾಚಿದ್ದಾರೆ. ಇತ್ತ ಭಿಕ್ಷೆ ಬೇಡಿರುವ ವಿಷಯ ತಿಳಿಯುತ್ತಿದ್ದಂತೆ ಆದ್ಯಾಳಿಗೆ ಚಿಕಿತ್ಸೆ ನೀಡುತ್ತಿದ್ದ ಮೈಸೂರಿನ ಆಸ್ಪತ್ರೆಯು ಚಿಕಿತ್ಸೆಯ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಕಡಿತ ಮಾಡಿದೆ. ಮಗುವನ್ನು ಡಿಸ್ಚಾರ್ಜ್‌ ಮಾಡಿಸಿಕೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಆದ್ಯಾಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಾಸಕ ದರ್ಶನ್‌ ಧ್ರುವನಾರಾಯಣ್‌ ಮಗುವಿನ ಚಿಕಿತ್ಸೆಯ ಬಗ್ಗೆ ಮುತುವರ್ಜಿ ವಹಿಸಿದ್ದಾರೆ.

ಏಕೆ ಭಿಕ್ಷಾಟನೆ?:

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನಿವಾಸಿಗಳಾದ ಮಹೇಶ್‌ ಮತ್ತು ರಾಣಿ ದಂಪತಿ ತಮ್ಮ ಮಗಳು ಆದ್ಯಾ ಜತೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬದನವಾಳು ಸಮೀಪ ರಸ್ತೆ ಅಪಘಾತದಲ್ಲಿ ಮೂವರೂ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಆದ್ಯಾ ಗಂಭೀರವಾಗಿ ಗಾಯಗೊಂಡಿದ್ದರು. ಬುಧವಾರ ಆಕೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚ ₹1.5 ಲಕ್ಷ ಪಾವತಿಸಲು ಬಡ ಕುಟುಂಬಕ್ಕೆ ಕಷ್ಟವಾಗಿದೆ. ಇತ್ತ ಆದ್ಯಾಳ ತಂದೆ-ತಾಯಿಯೂ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಆದ್ಯಾಳ ದೊಡ್ಡಮ್ಮ ಮಂಗಳಮ್ಮ ಅವರು ತಮ್ಮ ಗ್ರಾಮಕ್ಕೆ ಬಂದು ಗ್ರಾಮದಲ್ಲಿ ಕೆಲ ಮನೆಗಳ ಮುಂದೆ ಸೆರಗೊಡ್ಡಿ ಭಿಕ್ಷೆ ಬೇಡಿ ಸುಮಾರು ₹80 ಸಾವಿರ ಸಂಗ್ರಹಿಸಿದ್ದಾರೆ.

ಮಗು ಆದ್ಯಾಳನ್ನು ಸದ್ಯ ಖಾಸಗಿ ಆಸ್ಪತ್ರೆಯಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈಗಲೂ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಭಿಕ್ಷೆ ವಿಡಿಯೋ ವೈರಲ್‌ ಆಗ್ತಿದ್ದಂತೆ

ಬಿಲ್‌ ₹25000ಕ್ಕೆ ಇಳಿಸಿದ ಆಸ್ಪತ್ರೆಮೈಸೂರು: ಮಗು ಆದ್ಯಾಳ ದೊಡ್ಡಮ್ಮ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತಿದ್ದ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಖಾಸಗಿ ಆಸ್ಪತ್ರೆಯು ಬಿಲ್‌ ಮೊತ್ತವನ್ನು 1.5 ಲಕ್ಷ ರು.ನಿಂದ 25 ಸಾವಿರ ರು.ಗೆ ಇಳಿಸಿದೆ. ಈ ಬಗ್ಗೆ ನಂಜನಗೂಡು ಶಾಸಕ ದರ್ಶನ್‌ ಧ್ರುವನಾರಾಯಣ್‌ ತಿಳಿಸಿದ್ದಾರೆ. ‘ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜೊತೆಗೆ ನಾನು ಮಾತನಾಡಿದ್ದೆ. ಅವರು ಬಿಲ್‌ ಮೊತ್ತವನ್ನು 25000 ರು.ಗೆ ಇಳಿಸಿದ್ದಾರೆ. ಕುಟುಂಬದವರ ಮನವಿಯ ಮೇರೆಗೆ ಗಾಯಾಳು ಆದ್ಯಾಳನ್ನು ಕೆ.ಆರ್.ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಾನು ಅಲ್ಲಿನ ವೈದ್ಯಾಧಿಕಾರಿಗಳ ಜೊತೆಗೂ ಮಾತನಾಡಿದ್ದು, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ’ ಎಂದು ದರ್ಶನ್‌ ಹೇಳಿದ್ದಾರೆ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ