- ಅಪಘಾತದಿಂದಾಗಿ ರಸ್ತೆಯಲ್ಲಿ ಬಿದ್ದಿದ್ದ ಮಂಜುನಾಥ್ ಬ್ಯಾಗ್‌ನಲ್ಲಿ ನಗದು ಪತ್ತೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಇಲ್ಲಿನ ಬೇಗೂರು ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿಯ ಬ್ಯಾಗ್‌ನಲ್ಲಿದ್ದ 3 ಲಕ್ಷ ರು.ವನ್ನು ಆತನ ಪೋಷಕರಿಗೆ ಹಸ್ತಾಂತರಿಸಿ ಬೇಗೂರು ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ.ಬೆಂಡಗಳ್ಳಿ ಬಳಿಯ ಎಂಆರ್‌ಪಿಎಲ್ ಹೊಸ ಪೆಟ್ರೋಲ್ ಬಂಕ್ ಬಳಿ ಬರಟಹಳ್ಳಿ ಗ್ರಾಮದ ಯುವಕ, ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ನೌಕರ ಮಂಜುನಾಥ್ ಬೈಕ್‌ನಿಂದ ಬಿದ್ದೋ, ಅಪರಿಚಿತ ವಾಹನ ಡಿಕ್ಕಿ ಹೊಡೆದೋ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಳೆದ ಬುಧವಾರ ಬೆಳಗ್ಗೆ ಬಿದ್ದಿದ್ದ.ಅಪಘಾತದ ವಿಷಯ ತಿಳಿದ ಬೇಗೂರು ಠಾಣೆಯ ಮುಖ್ಯ ಪೇದೆ ದಿವಾಕರ್, ಪುಟ್ಟರಾಜು, ಸ್ಥಳಕ್ಕಾಗಮಿಸಿ ಮೊದಲು ಗಾಯಾಳು ಮಂಜುನಾಥ್‌ರನ್ನು ಆ್ಯಂಬುಲೆನ್ಸ್ ಮೂಲಕ ಗುಂಡ್ಲುಪೇಟೆ ಆಸ್ಪತ್ರೆಗೆ ಕಳುಹಿಸಿದರು.ಬಳಿಕ ಗಾಯಾಳುವಿನ ವಿಳಾಸ ಪತ್ತೆಗೆ ಬೈಕ್‌ನಿಂದ ಬಿದ್ದಿದ್ದ ಬ್ಯಾಗ್ ನೋಡಿದಾಗ ಬ್ಯಾಗ್‌ನಲ್ಲಿ 3 ಲಕ್ಷ ಹಣವಿತ್ತು. ಮಂಜುನಾಥ್ ಅವರ ವಿಳಾಸ ಪತ್ತೆಯಾದ ಬಳಿಕ ಗಾಯಾಳು ಮಂಜುನಾಥ್‌ರ ತಂದೆ ತಾಯಿಯನ್ನು ಠಾಣೆಗೆ ಕರೆಸಿ ಬರಟಹಳ್ಳಿ ಗ್ರಾಮದ ಎಎಸ್‌ಐ ಮಲ್ಲಿಕಾರ್ಜುನ ಸಮ್ಮುಖದಲ್ಲಿ ಬ್ಯಾಗ್‌ನಲ್ಲಿ ದೊರೆತ 3 ಲಕ್ಷ ರು. ಹಣ ಹಾಗೂ ಮೊಬೈಲ್ ಅನ್ನು ಹಿಂದಿರುಗಿಸಿ, ಪ್ರಾಮಾಣಿಕತೆ ಮೆರೆದು ಇತರೆ ಅಧಿಕಾರಿಗಳಿಗೂ ಮಾದರಿಯಾಗಿದ್ದಾರೆ.ಪೊಲೀಸರು ಎಂದರೆ ಮೂಗು ಮುರಿಯುವ ಕಾಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗಾಯಾಳು ಬ್ಯಾಗ್‌ನಲ್ಲಿದ್ದಷ್ಟು ಹಣ ಹಾಗೂ ಮೊಬೈಲ್‌ನನ್ನು ಹಿಂದಿರುಗಿಸುವ ಮೂಲಕ ಮುಖ್ಯ ಪೇದೆಗಳಿಬ್ಬರು ಕರ್ತವ್ಯ ಪ್ರೇಮ ಮೆರೆದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತು ಕೇಳಿ ಬಂದಿದೆ.ಬೈಕ್‌ನಲ್ಲಿ ಬಿದ್ದು ಗಾಯಗೊಂಡ ಗಾಯಾಳು ಸದ್ಯಕ್ಕೀಗ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.---೧೯ಜಿಪಿಟಿ೪ಗಾಯಾಳು ಮಂಜುನಾಥ್ ಅವರ ಪೋಷಕರಿಗೆ ನಗದು ಹಸ್ತಾಂತರಿಸಿದ ಪೊಲೀಸರು.