ಕಡೂರು ತಾಲೂಕಿನ ಕುಂಕಾನಾಡು ಗ್ರಾಮದಲ್ಲಿ ಜಾನಪದ ಕಲಾವಿದ ಹಾಗೂ ಖ್ಯಾತ ಶಿಲ್ಪಿಗೆ ಸ್ವಗೃಹದಲ್ಲಿ ಆಹ್ವಾನ
ಕನ್ನಡ ಪ್ರಭ ವಾರ್ತೆ, ಕಡೂರುಬರುವ 2024 ರ ಜ.16 ರಂದು ಕಡೂರಿನ ಯಗಟಿ ಗ್ರಾಮದಲ್ಲಿ ನಡೆಯಲಿರುವ ದ್ವಿತೀಯ ಜಾನಪದ ಸಮ್ಮೇಳನದ ಅಧ್ಯಕ್ಷರಿಗೆ ಸಾಂಪ್ರದಾಯಿಕವಾಗಿ ಆಹ್ವಾನ ನೀಡಲಾಯಿತು.
ಸಮ್ಮೇಳನಾಧ್ಯಕ್ಷರಾದ ತಾಲೂಕಿನ ಕುಂಕಾನಾಡು ಗ್ರಾಮದ ಜಾನಪದ ಕಲಾವಿದ ಹಾಗೂ ಖ್ಯಾತ ಶಿಲ್ಪಿ ಈ, ಓಂಕಾರ ಮೂರ್ತಿಯವರಿಗೆ ಅವರ ಸ್ವಗೃಹದಲ್ಲಿ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಆಹ್ವಾನಿಸಿದರು.ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಓಂಕಾರ್ ಮೂರ್ತಿಯವರು ಜಾನಪದ ಜಾಗೃತಿ ವೇದಿಕೆ ಮೂಲಕ ಸಾಹಿತ್ಯ, ಒಗಟು, ಗಾಧೆ, ಜಾನಪದ ಹಾಡುಗಳು ಮುಂತಾದ ಸಾಹಿತ್ಯ ಪ್ರತಿಗಳನ್ನು, ಮನೆ ಮನೆಗೆ ಹಂಚಿ ಅನೇಕ ವರ್ಷಗಳ ಹಿಂದೆಯೇ ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯದ ಬಗ್ಗೆ ಅರಿವನ್ನು ಇಂದಿನ ಪೀಳಿಗೆ ಯವರಲ್ಲಿ ಮೂಡಿಸುತ್ತಾ ಬಂದಿದ್ದಾರೆ.
ಮಣ್ಣು, ಮರದ ಗೊಂಬೆಗಳು, ಆಕೃತಿಗಳು ಮತ್ತು ಶಿಲ್ಪಗಳನ್ನು ನೈಜ ರೂಪದಲ್ಲಿ ಬಿಡಿಸುವುದು, ಕೆತ್ತುವುದು ಮತ್ತು ಜನಪದ ಚಿತ್ರಗಳನ್ನು ಬಹಳ ಕೌಶಲ್ಯಪೂರ್ಣವಾಗಿ ಬರೆದಿರುವುದು ಅವರ ಜನಪದ ಕಲಾ ಪ್ರತಿಭೆಗೆ ಹಿಡಿದ ಕೈ ಕನ್ನಡಿ. ಇಂತಹ ಮಹಾನ್ ಕಲಾವಿದರನ್ನು ಸರ್ವಾನುಮತದಿಂದ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ತೃಪ್ತಿ ತಂದಿದೆ ಎಂದರು.ಕಜಾಪದ ತಾಲೂಕು ಅಧ್ಯಕ್ಷ ಜಗದೀಶ್ ಆಚಾರ್ಯ ಮಾತನಾಡಿ, ಸಮ್ಮೇಳನ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ, ಸಮ್ಮೇಳನ ಅಧ್ಯಕ್ಷರನ್ನು ಜಿಲ್ಲೆಯ ಪ್ರಮುಖ ಕಲಾ ತಂಡಗಳಾದ ವೀರಗಾಸೆ, ಡೊಳ್ಳು ಕುಣಿತ, ಪಟ ಕುಣಿತ, ನಂದಿ ದ್ವಜ, ಅಸಾದಿ ಕುಣಿತ ಕೋಲಾಟ, ಕಂಸಾಳೆ, ಮುಂತಾದ ಕಲಾತಂಡಗಳ ಮೂಲಕ ಪೂರ್ಣ ಕುಂಭ ಸ್ವಾಗತದೊಂದಿಗೆ ಯಗಟಿ ಗ್ರಾಮದಲ್ಲಿ ಮೆರವಣಿಗೆ ಮೂಲಕ ವೇದಿಕೆ ವರೆಗೆ ಕರೆತರಲಾಗುವುದು. ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರು, ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ತಜ್ಞರು, ಸಂಗೀತ ಕಲಾವಿದರು, ಜಿಲ್ಲೆಯ ವಿವಿಧ ಜಾನಪದ ಸಾಹಿತಿಗಳು ಭಾಗವಹಿಸ ಲಿದ್ದಾರೆ ಎಂದರು.
ಮಧ್ಯಾಹ್ನದ ಊಟದ ನಂತರ, ಜಾನಪದ ಗೋಷ್ಠಿ, ಗೀತ ಗಾಯನ, ಸಮಾರೋಪ ಸಮಾರಂಭ ನಡೆಯಲಿವೆ. ಆನಂತರ ಸಾಂಸ್ಕೃತಿಕ ಕಾರ್ಯಕ್ರಮ, ಜಗಜ್ಯೋತಿ ಬಸವೇಶ್ವರ ಪೌರಾಣಿಕ ನಾಟಕ ನಡೆಯಲಿವೆ. ಆದ ಕಾರಣ ಜಿಲ್ಲೆಯ ಎಲ್ಲಾ ತಾಲೂಕುಗಳ ಕಲಾವಿದರು ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನ ಯಶಸ್ವಿಯಾಗಿ ನಡೆಸಿ ಕೊಡುವಂತೆ ಮನವಿ ಮಾಡಿದರು.ಓಂಕಾರ್ ಮೂರ್ತಿ ಮಾತನಾಡಿ, ರಾಜ್ಯದಾದ್ಯಂತ ನಾನು ಮಾಡಿದ ಕಲಾ ಸೇವೆಯನ್ನು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಮತ್ತು ಪದಾಧಿಕಾರಿಗಳು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿ ಗೌರವಿಸುತ್ತಿರುವುದು ನನಗೆ ಆತ್ಮತೃಪ್ತಿ ತಂದಿದೆ ಎಂದರು.ಈ ಸಂದರ್ಭದಲ್ಲಿ ಕಜಾಪ ಘಟಕದ ಕಾರ್ಯದರ್ಶಿ ಕುಂಕಾನಾಡು ನಾಗರಾಜು, ಅಜ್ಜಂಪುರ ತಾಲೂಕು ಅಧ್ಯಕ್ಷ ಡಾ. ಮಾಳೇನಳ್ಳಿ ಬಸಪ್ಪ, ಜಿಲ್ಲಾ ಉಪಾಧ್ಯಕ್ಷ ಜಿ.ಎಸ್ ತಿಪ್ಪೇಶ್. ಸಂಘಟನಾ ಕಾರ್ಯದರ್ಶಿ ಚಿಕ್ಕನಲ್ಲೂರು ಜಯಣ್ಣ,ತಿಪ್ಪೇಶ, ಮತ್ತು ಹಾಲಯ್ಯ ಮತ್ತಿತರರಿದ್ದರು.
27ಕೆಕೆಡಿಯು2.
ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ನಡೆಯಲಿರುವ ಕಜಾಪ ಸಮ್ಮೇಳನದ ಅಧ್ಯಕ್ಷ ಓಂಕಾರಮೂರ್ತಿಯವರಿಗೆ ಕಜಾಪ ಜಿಲ್ಲಾಧ್ಯಕ್ಷ ಸುರೇಶ್ ಮತ್ತು ಪದಾಧಿಕಾರಿಗಳು ಆಹ್ವಾನ ನೀಡಿ ಗೌರವಿಸಲಾಯಿತು.