ಮಂಗಳೂರು: ಕೊಂಕಣಿ ವಾರಪತ್ರಿಕೆ ರಾಕ್ಣೊ ವತಿಯಿಂದ ರಾಕ್ಣೊ ಪ್ರಶಸ್ತಿ ೨೦೨೬ ಪ್ರದಾನ, ಪುಸ್ತಕ ಬಿಡುಗಡೆ ಹಾಗೂ ಕೊಂಕಣಿ ಬರಹಗಾರರು ಮತ್ತು ಓದುಗರ ಸಮಾಗಮ ಕಾರ್ಯಕ್ರಮ ಭಾನುವಾರ ನಗರದ ಬಿಜೈ ಚರ್ಚ್ ಹಾಲ್‌ನಲ್ಲಿ ನಡೆಯಿತು.
ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಂಕಣಿ ಹೃದಯದ ಅತ್ಯಂತ ಪ್ರೀತಿಯ ಭಾಷೆ. ಅದರ ಬೆಳವಣಿಗೆಯನ್ನು ನಿರಂತರವಾಗಿ ಪೋಷಿಸುತ್ತಿರುವ ರಾಕ್ಣೊ ಪತ್ರಿಕೆಯ ಕಾರ್ಯ ಶ್ಲಾಘನೀಯ ಎಂದರು.
ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಜೆರ್ರಿ ನಿಡ್ಡೋಡಿ ಅವರಿಗೆ ವರ್ಷದ ಅತ್ಯುತ್ತಮ ಬರಹಗಾರ ೨೦೨೬ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಎಡ್ವರ್ಡ್ ನಜರೆತ್ ಅವರು ಅಭಿನಂದನಾ ಭಾಷಣ ಮಾಡಿದರು.ಆಂಜೆಲೊರ್ ಚರ್ಚ್‌ನ ಅಂಜೆಲೊರ್ಚೊ ಆಂಜ್ ಪತ್ರಿಕೆಗೆ ವರ್ಷದ ಅತ್ಯುತ್ತಮ ಧರ್ಮಕೇಂದ್ರದ ನಿಯತಕಾಲಿಕೆ ೨೦೨೬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಿಕೆಯ ಸಂಪಾದಕ ರೋಶನ್ ಪತ್ರಾವೊ ಅವರನ್ನು ಸನ್ಮಾನಿಸಲಾಯಿತು. ಫ್ರಾನ್ಸಿಸ್ ಡಿಕುನ್ಹಾ ಅಭಿನಂದನಾ ಭಾಷಣ ಮಾಡಿದರು.
ಬಿಜೈ ಚರ್ಚ್ ಧರ್ಮಗುರು ಫಾ.ಸ್ಟ್ಯಾನಿ ಪಿರೇರಾ, ಉಪಾಧ್ಯಕ್ಷ ನಿರ್ಮಲ್ ಡಿಸೋಜಾ, ಕಾರ್ಯದರ್ಶಿ ಅವಿತಾ ಪಿಂಟೊ ಇದ್ದರು.ಸಂಪಾದಕ ಫಾ.ರೂಪೇಶ್ ಮಾಡ್ತಾ ಸ್ವಾಗತಿಸಿದರು. ಪ್ಯಾರಿಷ್ ಬುಲೆಟಿನ್ ಸಂಪಾದಕ ಗಾಡ್ವಿನ್ ಪಿಂಟೊ ವಂದಿಸಿದರು. ತಾರಾ ಲವಿ ಗಂಜಿಮಠ ನಿರೂಪಿಸಿದರು.