ಉಡುಪಿ ಚರ್ಚ್‌ಗಳಲ್ಲಿ ವಿಶೇಷ ಪೂಜೆ, ಪುಷ್ಪಾರ್ಚನೆ

KannadaprabhaNewsNetwork |  
Published : Sep 10, 2026, 02:45 AM IST
ಉಡುಪಿಯ ಶೋಕಮಾತಾ ಇಗರ್ಜಿಯಲ್ಲಿ ಸಂಭ್ರಮದ ಮೊಂತಿ ಫೆಸ್ತ್ ಆಚರಿಸಲಾಯಿತು | Kannada Prabha

ಸಾರಾಂಶ

ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಮಂಗಳವಾರ ಮೊಂತಿ ಫೆಸ್ಟ್‌ ಯಾನೆ ಮಾತೆ ಮೇರಿ ಹುಟ್ಟುಹಬ್ಬ ಮತ್ತು ತೆನೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಮಂಗಳವಾರ ಮೊಂತಿ ಫೆಸ್ಟ್‌ ಯಾನೆ ಮಾತೆ ಮೇರಿ ಹುಟ್ಟುಹಬ್ಬ ಮತ್ತು ತೆನೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಚರ್ಚ್‌ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ, ಮಾತೆ ಮೇರಿಯಮ್ಮನ ಬಾಲರೂಪಕ್ಕೆ ಮಕ್ಕಳಿಂದ ಪುಷ್ಪಾರ್ಚನೆ ನಡೆದರೆ, ಮನೆ ಮನೆಗಳಲ್ಲಿ ಸಸ್ಯಾಹಾರಿ ಊಟ, ಹೊಸ ಅಕ್ಕಿಯ ಹಾಲು ಪಾಯಸದೂಟದೊಂದಿಗೆ ಸಂಭ್ರಮಿಸಿದರು.ಕಳೆದ ಒಂಬತ್ತು ದಿನಗಳಿಂದ ಮಾತೆ ಮೇರಿಗೆ ಮಕ್ಕಳು ಸಲ್ಲಿಸುವ ಪುಷ್ಪಾರ್ಚನೆಯ ವೈಭವದ ಉತ್ತುಂಗರೂಪವಾಗಿ ಕರಾವಳಿಯ ಪ್ರತಿ ಚರ್ಚ್‌ನ ಗ್ರೊಟ್ಟೊದ ಮುಂಭಾಗದಲ್ಲಿ ಇರಿಸಿದ ಬಾಲಮೇರಿ ಪ್ರತಿಮೆಗೆ ನೂರಾರು ಮಕ್ಕಳು ಬಣ್ಣಬಣ್ಣದ ಪುಷ್ಪವೃಷ್ಟಿ ನಡೆಸಿ ತಮ್ಮ ಭಕ್ತಿ, ಖುಷಿಯನ್ನು ಮೆರೆದರು.ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಧರ್ಮಗುರುಗಳು ತೆನೆ ಪೂಜೆ, ಬಲಿಪೂಜೆ ನೆರವೇರಿಸಿದರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರ ಅನುಪಸ್ಥಿತಿಯಲ್ಲಿ, ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ನಿವೃತ್ತ ಧರ್ಮಾಧ್ಯಕ್ಷ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೊಸ ತೆನೆಯನ್ನು ಆಶೀರ್ವಚಿಸಿ ಹಬ್ಬದ ಪವಿತ್ರ ಬಲಿಪೂಜೆಯನ್ನು ನೆರವೇರಿಸಿ ಹಬ್ಬದ ಸಂದೇಶ ನೀಡಿದರು.ಉಡುಪಿ ಶೋಕಮಾತಾ ದೇವಾಲಯದಲ್ಲಿ ಧರ್ಮಗುರು ವಂ|ಡೆನಿಸ್ ಡೆಸಾ ನೇತೃತ್ವದಲ್ಲಿ ವಿಶೇಷ ಬಲಿಪೂಜೆ ನೆರವೇರಿತು. ವಂ.ಪ್ರವೀಣ್ ಲಿಯೋ ಹಾಗೂ ವಂ|ವಿಜಯ್ ಡಿಸೋಜಾ ಉಪಸ್ಥಿತರಿದ್ದರು.ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಞಿಂಜ್ಞೋರ್ ಫ್ರಾನ್ಸಿಸ್ ಲೂವಿಸ್ ಹೊಸ ತೆನೆಯನ್ನು ಆಶೀರ್ವಚಿಸಿ, ಬಲಿಪೂಜೆ ಅರ್ಪಿಸಿದರು.ತೆನೆ ಹಬ್ಬದ ಅಂಗವಾಗಿ ಮುಂಜಾನೆಯೇ ಭತ್ತದ ತೆನೆ ಮತ್ತು ಕಬ್ಬನ್ನು ಊರಿನ ಗುರಿಕಾರರು ಚರ್ಚ್‌ಗೆ ಮೆರವಣಿಗೆಯಲ್ಲಿ ಕೊಂಡೊಯ್ದ, ಅಲ್ಲಿ ಧರ್ಮಗುರುಗಳು ತೆನೆ ಪೂಜೆ ನಡೆಸಿ ಭಕ್ತರಿಗೆ ಹಂಚಿದರು. ಈ ತೆನೆಯನ್ನು ಭಕ್ತಿಯಿಂದ ಮನೆಗೆ ಕೊಂಡೊಯ್ದ ದೇವರ ಪೀಠದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸಿದರು. ಈ ತೆನೆಯ ಭತ್ತದ ಅಕ್ಕಿ ತೆಂಗಿನ ಹಾಲಿನಿಂದ ಪಾಯಸ ಮಾಡಿ ಸವಿಯುವುದು ಈ ಹಬ್ಬ ವಿಶೇಷತೆಯಾಗಿದೆ.ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಂ|ಆಲ್ಬನ್ ಡಿಸೋಜಾ, ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಂ.ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ವಂ|ಚಾರ್ಲ್ಸ್ ಮಿನೇಜಸ್ ಸೇರಿದಂತೆ ಇನ್ನಿತರ ಚರ್ಚುಗಳಲ್ಲಿ ಕೂಡ ತೆನೆಹಬ್ಬ ಮತ್ತು ಮಾತೆ ಮೇರಿಯ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಕ್ರೀಡಾಪಟುಗಳಲ್ಲಿ ಅಪ್ರತಿಮ ಪ್ರತಿಭೆ
ಸಮಾಜದಲ್ಲಿ ಅಸಮಾನತೆ, ಅಂಧಕಾರ ದೂರವಾಗಲಿ