-ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್ ಅಹಮ್ಮದ್ ಮಾಹಿತಿ
---ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮುಸ್ಲಿಮರ 2ಬಿ ಮೀಸಲಾತಿಯನ್ನು ಪುನರ್ ಸ್ಥಾಪಿಸಿ ಶೇ.8ಕ್ಕೆ ಏರಿಸಬೇಕು. ವಕ್ಫ್ ಆಸ್ತಿಗಳ ರಕ್ಷಣೆಯಾಗಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದಿಂದ ಬೆಳಗಾವಿ ಚಲೋ ಅಂಬೇಡ್ಕರ್ ಜಾಥಾ-2ನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್ ಅಹಮ್ಮದ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಈ ಜಾಥಾವು ಡಿ.10ರಿಂದ ಉಡುಪಿಯಿಂದ ಪ್ರಾರಂಭವಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹೀಗೆ ಸಾಗಿ ಡಿ.16 ರಂದು ಬೆಳಗಾವಿ ತಲುಪುತ್ತದೆ ಎಂದರು.
ಈ ಜಾಥಾದಲ್ಲಿ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಸೇರಿದಂತೆ ವಿವಿಧ ಸಂಘಟನೆಗಳ ನಾಯಕರು ಸಹಕಾರ ನೀಡಲಿದ್ದಾರೆ ಎಂದರು. ಚಳಿಗಾಲದ ಅಧಿವೇಶನದ ಈ ಸಂದರ್ಭದಲ್ಲಿ ಸರ್ಕಾರದ ಗಮನಸೆಳೆಯಲು ಈ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಈ ಜಾಥಾ ಶಿವಮೊಗ್ಗಕ್ಕೆ ಡಿ.12ರಂದು ರಾತ್ರಿ 9ಕ್ಕೆ ತಲುಪಲಿದ್ದು, ನಗರದ ಬೈಪಾಸ್ ರಸ್ತೆಯಲ್ಲಿರುವ ದಿಲ್ಲಿ ದರ್ಬಾರ್ ಹೋಟೆಲ್ ಹತ್ತಿರದಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಈ ಸಭಾ ಕಾರ್ಯಕ್ರಮದಲ್ಲಿ ಎಸ್‌ಡಿಪಿಐನ ಮುಖ್ಯಸ್ಥ ಭಾಸ್ಕರ್ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು, ಪ್ರಮುಖ ಬೇಡಿಕೆಗಳತ್ತ ಚರ್ಚಿಸಲಿದ್ದಾರೆ ಎಂದರು.ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಯಾಗಬೇಕು. ಮುಸ್ಲಿಮರ 2ಬಿ ಮೀಸಲಾತಿಯನ್ನು ಪುನರ್‌ಸ್ಥಾಪಿಸಿ ಶೇ.8ಕ್ಕೆ ಏರಿಸಬೇಕು. ಕಾಂತರಾಜ್ ಆಯೋಗದ ವರದಿ ಜಾರಿಯಾಗಬೇಕು. ವಕ್ಫ್ ಆಸ್ತಿಗಳ ರಕ್ಷಣೆಯಾಗಬೇಕು. ಪರಿಶಿಷ್ಟರ ಹಣವನ್ನು ಇತರೆ ಯೋಜನೆಗಳಿಗೆ ಬಳಸಬಾರದು. ಅಲ್ಪಸಂಖ್ಯಾತರ ಕಲ್ಯಾಣಕ್ಕೆ 10 ಸಾವಿರ ಕೋಟಿ ಮೀಸಲಿಡಬೇಕು. ಖಾಸಗಿ ವಲಯದಲ್ಲಿ ಮೀಸಲಾತಿಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಇಸಾಕ್ ಅಹಮ್ಮದ್, ಫೈರೂಜ್, ಅಹಮ್ಮದ್, ಮನ್ಸೂರು ಮುಂತಾದವರು ಇದ್ದರು.--------------------
ಪೋಟೋ: 11ಎಸ್‌ಎಂಜಿಕೆಪಿ09ಶಿವಮೊಗ್ಗದ ಪತ್ರಿಕಾಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್ ಅಹಮ್ಮದ್ ಮಾತನಾಡಿದರು.