ಬೆಳಗಾವೀಲಿ ಮಹಾರಾಷ್ಟ್ರದ ವಿಮೆ ಕೇಂದ್ರಗಳಿಗೆ ಡೀಸಿ ಬೀಗ

KannadaprabhaNewsNetwork |  
Published : Jan 14, 2024, 01:32 AM IST
ವಿಮಾ ಕೇಂದ್ರದಲ್ಲಿ ಪೊಲೀಸರು | Kannada Prabha

ಸಾರಾಂಶ

ಬೆಳಗಾವಿ ಸೇರಿ ಕರ್ನಾಟಕ ಗಡಿಭಾಗದ 865 ಹಳ್ಳಿ, ಪಟ್ಟಣಗಳಲ್ಲಿ ಮಹಾರಾಷ್ಟ್ರ ಸರ್ಕಾರ ಆರಂಭಿಸಿದ ಮಹಾತ್ಮ ಫುಲೆ ಜನಾರೋಗ್ಯ ವಿಮೆ ಯೋಜನೆಯ ಸೇವಾ ಕೇಂದ್ರಗಳಿಗೆ ಜಿಲ್ಲಾಡಳಿತ ಇದೀಗ ಬೀಗ ಜಡಿದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಸೇರಿ ಕರ್ನಾಟಕ ಗಡಿಭಾಗದ 865 ಹಳ್ಳಿ, ಪಟ್ಟಣಗಳಲ್ಲಿ ಮಹಾರಾಷ್ಟ್ರ ಸರ್ಕಾರ ಆರಂಭಿಸಿದ ಮಹಾತ್ಮ ಫುಲೆ ಜನಾರೋಗ್ಯ ವಿಮೆ ಯೋಜನೆಯ ಸೇವಾ ಕೇಂದ್ರಗಳಿಗೆ ಜಿಲ್ಲಾಡಳಿತ ಇದೀಗ ಬೀಗ ಜಡಿದಿದೆ. ಈ ಮೂಲಕ ಕನ್ನಡ ನೆಲದಲ್ಲಿ ಭಾಷಾ ದ್ವೇಷ ಹರಡಲು ಹೊರಟಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಜಿಲ್ಲಾಡಳಿತ ತಿರುಗೇಟು ನೀಡಿದೆ.

ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದಲ್ಲಿ ಈಗಾಗಲೇ ಮಹಾತ್ಮ ಫುಲೆ ಜನಾರೋಗ್ಯ ವಿಮೆ ಯೋಜನೆ ಜಾರಿಗೆ ತಂದಿದೆ. ಇದೀಗ ಈ ವಿಮೆ ಯೋಜನೆಯನ್ನು ಬೆಳಗಾವಿ ಸೇರಿ ಕರ್ನಾಟಕದ ಗಡಿಪ್ರದೇಶಗಳಿಗೂ ವಿಸ್ತರಿಸುವ ಮೂಲಕ ಉದ್ಧಟತನ ತೋರಿತ್ತು. ಅಲ್ಲದೆ, ಮಹಾರಾಷ್ಟ್ರ ಮುಖ್ಯಮಂತ್ರಿ ವೈದ್ಯಕೀಯ ಸಹಾಯ ನಿಧಿಯನ್ನೂ ಕರ್ನಾಟಕ ಸರ್ಕಾರದ ಗಮನಕ್ಕೆ ತಾರದೇ ಗಡಿ ಭಾಗದ ಮರಾಠಿಗರಿಗೆ ಮಂಜೂರು ಮಾಡಿತ್ತು. ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌)ಯನ್ನು ಮುಂದಿಟ್ಟುಕೊಂಡು ಈ ಯೋಜನೆ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿತ್ತು. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಗರದಲ್ಲಿ ನಾಲ್ಕು ಸೇವಾ ಕೇಂದ್ರಗಳನ್ನೂ ಆರಂಭಿಸಲಾಗಿದ್ದು, ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಇತ್ತೀಚೆಗಷ್ಟೇ ಬೆಳಗಾವಿಗೆ ಆಗಮಿಸಿ ಯೋಜನೆಗೆ ಚಾಲನೆ ಕೊಟ್ಟಿದ್ದರು. ಜತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಎಂಇಎಸ್‌ ಕಾರ್ಯಕರ್ತೆಯೊಬ್ಬಳಿಗೆ ಪರಿಹಾರದ ಹಣವನ್ನೂ ಬಿಡುಗಡೆ ಮಾಡಿಸಿದ್ದರು.

ಮಹಾರಾಷ್ಟ್ರ ಸರ್ಕಾರದ ಈ ಕ್ರಮಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಜತೆಗೆ, ಬೆಳಗಾವಿಯಲ್ಲಿ ಆರಂಭಿಸಿರುವ ಸೇವಾ ಕೇಂದ್ರಗಳನ್ನು ಬಂದ್‌ ಮಾಡಬೇಕು. ಈ ಯೋಜನೆ ಅನುಷ್ಠಾನಗೊಳಿಸುತ್ತಿರುವ ಎಂಇಎಸ್‌ ವಿರುದ್ಧ ರಾಜ್ಯದ್ರೋಹದ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೇಲೆ ತೀವ್ರ ಒತ್ತಡ ಹೇರಿದ್ದವು. ಅದರಂತೆ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಅವರು ಮಹಾರಾಷ್ಟ್ರ ಸರ್ಕಾರದ ಯೋಜನೆ ಜಾರಿಗೊಳಿಸಲು ತೆರೆಯಲಾಗಿದ್ದ ನಾಲ್ಕು ಸೇವಾ ಕೇಂದ್ರಗಳಿಗೆ ನೋಟಿಸ್‌ ಜಾರಿ ಮಾಡಿದ್ದರು. ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ್‌ ಕೋಣಿ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ನೇತೃತ್ವದ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ, ಪೊಲೀಸರ ಸಮ್ಮುಖದಲ್ಲೇ ಬೀಗ ಜಡಿದರು.

13ಬಿಇಎಲ್‌2

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ