ರೈತರಿಗೆ ಪರಿಹಾರ ನೀಡದಿದ್ದರೆ ಪರಿಸ್ಥಿತಿ ಗಂಭೀರವಾಗುವುದು: ಜೋಗಣ್ಣವರ

KannadaprabhaNewsNetwork | Updated : Jan 14 2024, 05:37 PM IST

ಸಾರಾಂಶ

ತೀವ್ರ ಬರಗಾಲದಿಂದ ರೈತ ಸಮುದಾಯ ಸಂಕಷ್ಟದಲ್ಲಿ ಸಿಲುಕಿದೆ, ಸರ್ಕಾರ ಸದ್ಯ ರೈತರಿಗೆ ಯೋಗ್ಯ ಬೆಳೆ ಹಾನಿ ಪರಿಹಾರ ನೀಡದಿದ್ದರೆ ಮುಂದಿನ ಪರಿಸ್ಥಿತಿ ಗಂಭೀರವಾಗುತ್ತದೆ ಎಂದು ರಾಜ್ಯ ರೈತ ಸೇನಾ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನರಗುಂದ: ತೀವ್ರ ಬರಗಾಲದಿಂದ ರೈತ ಸಮುದಾಯ ಸಂಕಷ್ಟದಲ್ಲಿ ಸಿಲುಕಿದೆ, ಸರ್ಕಾರ ಸದ್ಯ ರೈತರಿಗೆ ಯೋಗ್ಯ ಬೆಳೆ ಹಾನಿ ಪರಿಹಾರ ನೀಡದಿದ್ದರೆ ಮುಂದಿನ ಪರಿಸ್ಥಿತಿ ಗಂಭೀರವಾಗುತ್ತದೆ ಎಂದು ರಾಜ್ಯ ರೈತ ಸೇನಾ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 

3103ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಪ್ರಸಕ್ತ ವರ್ಷ ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆಯಾಗದೆ ಸಂಪೂರ್ಣ ಬರಗಾಲ ಬಿದ್ದಿದೆ. 

ರಾಜ್ಯದ ರೈತ ಸಮುದಾಯ ಎರಡು ಹಂಗಾಮಿನಲ್ಲಿ ಅಲ್ಪಸ್ವಲ್ಪ ಮಳೆಗೆ ಜಮೀನು ಬಿತ್ತನೆ ಮಾಡಿದ್ದರು. ಆದರೆ ನಂತರ ದಿನಗಳಲ್ಲಿ ಮಳೆಯಾಗದೆ ತೇವಾಂಶ ಕೊರತೆಯಿಂದ ಬಿಸಿಲಿನ ತಾಪಕ್ಕೆ ಬೆಳೆಗಳನ್ನು ಓಣಗಿ ಹೋದರೂ ಸಹ ರಾಜ್ಯ ಸರ್ಕಾರ ರೈತರಿಗೆ ಯೋಗ್ಯ ಪರಿಹಾರ ನೀಡದೆ, ಕೇಂದ್ರ ಸರ್ಕಾರ ನಮಗೆ ಅನುದಾನ ನೀಡುತ್ತಿಲ್ಲವೆಂದು ನೆಪ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಸರ್ಕಾರದಿಂದ ಸದ್ಯ ಪ್ರತಿ ರೈತರ ಖಾತಗೆ 2 ಸಾವಿರ ರು.ಗಳನ್ನು ಪರಿಹಾರ ನೀಡುತ್ತೇವೆಂದು ಹೇಳುವದು ಯಾವ ಪುರಷಾರ್ಥಕ್ಕೆ ಎಂದು ಪ್ರಶ್ನೆ ಮಾಡಿದರು.

ರಾಜ್ಯ ಸರ್ಕಾರಕ್ಕೆ ಇನ್ನು ಕಾಲ ಮಿಂಚಿಲ್ಲ. ಸಚಿವ ಸಂಪುಟ ಸಭೆ ಕರೆದು ರಾಜ್ಯದ ರೈತರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ಪ್ರತಿ 1ಎಕರೆಗೆ 25 ಸಾವಿರ ರು. ಪರಿಹಾರ ನೀಡಬೇಕು. ಈ ಹಿಂದೆ ಎಸ್.ಎಂ. ಕೃಷ್ಣವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಮಂಡ್ಯ ಭಾಗದ ರೈತರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ಪರಿಹಾರ ನೀಡಿದ ರೀತಿಯಲ್ಲಿ ಈ ಸರ್ಕಾರ ವಿಶೇಷ ಪರಿಹಾರ ನೀಡಬೇಕು.

ರೈತರು ಕೃಷಿಗಾಗಿ ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳಲ್ಲಿ ಮಾಡಿರುವ ಎಲ್ಲಾ ರೀತಿಯ ಸಾಲ ಮನ್ನಾ ಮಾಡಲು ಸರ್ಕಾರ ಬೇಗ ತೀರ್ಮಾನ ತೆಗೆದುಕೊಳ್ಳಬೇಕು. ಒಂದು ವೇಳೆ ಸರ್ಕಾರ ಈ ಬರಗಾಲ ಸಂದರ್ಭದಲ್ಲಿ ರೈತ ಸಮುದಾಯ ನಿರ್ಲಕ್ಷ್ಯ ಮಾಡಿದರೆ ರೈತರು ರಾಜ್ಯದಲ್ಲಿ 3ನೇ ರೈತ ಬಂಡಾಯ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದು ಎಚ್ಚರಿಕೆ ನೀಡಿದರು. 

ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಶಿವಪ್ಪ ಸಾತಣ್ಣವರ, ಜಗನ್ನಾಥ ಮುಧೋಳೆ, ಶಂಕ್ರಪ್ಪ ಜಾಧವ, ಯಲ್ಲಪ್ಪ ಸಾತಣ್ಣವರ, ಮಲ್ಲೇಶ ಅಬ್ಬಗೇರಿ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವಾಣ ಉಪಸ್ಥಿತರಿದ್ದರು.

Share this article